ಮಂಡ್ಯ: ಜಿಲ್ಲೆಯಲ್ಲಿ ಗೂಂಡಾ ರಾಜಕಾರಣ ನಡೆಯಲ್ಲ. ಹೊರ ಜಿಲ್ಲೆಯವರು ಮಂಡ್ಯ ಜಿಲ್ಲೆಗೆ ಬಂದು ಗುಂಪುಗಾರಿಕೆ ಮಾಡಿ, ಗೂಂಡಾ ರಾಜಕಾರಣ ಮಾಡಿದರೆ ತಕ್ಕ ಶಾಸ್ತಿ ಅನುಭವಿಸಬೇಕಾಗುತ್ತದೆ ಎಂದು ಬಿಜೆಪಿಯ ನೂತನ ಶಾಸಕ ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ.
ಅಭಿಮಾನಿಗಳಿಂದ ತಮ್ಮ ನಿವಾಸದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಈ ಕ್ಷೇತ್ರದಲ್ಲಿ ಗೂಂಡಾ ರಾಜಕಾರಣ ನಡೆಯೋದಿಲ್ಲ ಎಂಬುದನ್ನು ಜನ ತೋರಿಸಿಕೊಟ್ಟಿದ್ದಾರೆ. ಮಾಜಿ ಸಚಿವ ಹೆಚ್.ಡಿ. ರೇವಣ್ಣರ ಬಗ್ಗೆ ನನಗೆ ಅಪಾರ ಗೌರವವಿದೆ. ಅದನ್ನು ಅವರು ಉಳಿಸಿಕೊಳ್ಳಬೇಕು ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದರು.
ಸಿಎಂ ಯಡಿಯೂರಪ್ಪನವರಿಗೆ ನನಗೆ ಇಂತಹದ್ದೇ ಖಾತೆ ಕೊಡಿ ಎಂದು ಬೇಡಿಕೆ ಇಟ್ಟಿಲ್ಲ. ಉತ್ತಮ ಖಾತೆ ಕೊಡುತ್ತಾರೆ ಎಂಬ ನಿರೀಕ್ಷೆ ಇದೆ. ಸೋತ ಅನರ್ಹರಿಗೂ ಅವಕಾಶ ಸಿಗುವ ಸಾಧ್ಯತೆ ಇದೆ ಎಂದರು.
ಇಡೀ ಜಿಲ್ಲೆಗೆ ತಾಲೂಕನ್ನು ಮಾದರಿಯನ್ನಾಗಿ ಮಾಡುವೆ. ಅಭಿವೃದ್ಧಿಗೆ ಮತ್ತೊಂದು ಹೆಸರೇ ನಾರಾಯಣಗೌಡ. ಅಭಿವೃದ್ಧಿ ಮೂಲಕ ನನ್ನ ಮಾತು ಉಳಿಸಿಕೊಳ್ಳುವೆ. ತಾಲೂಕಿನ ಅಭಿವೃದ್ಧಿಯೇ ನನ್ನ ಮೂಲ ಮಂತ್ರ ಎಂದರು.