ಮಂಡ್ಯ: ರಮೇಶ್ ಜಾರಕಿಹೊಳಿರವರನ್ನೇ ಯಾಕೆ ಟಾರ್ಗೆಟ್ ಮಾಡಿದ್ರು?, ಬೇರೆಯವರನ್ನು ಯಾಕೆ ಮಾಡಿಲ್ಲ? ಎಂದು ಸಿಡಿ ಪ್ರಕರಣದ ದೂರು ವಾಪಸ್ ಪಡೆದ ವಿಚಾರಕ್ಕೆ ಶಾಸಕ ಸುರೇಶ್ ಗೌಡ ಪ್ರತಿಕ್ರಿಯೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದರ ಮಧ್ಯೆ ಏನೋ ಆಗಿರುತ್ತದೆ, ಕಂಪ್ಲೆಂಟ್ ಕೊಟ್ಟು ಯಾಕೆ ವಾಪಸ್ ಪಡೆದಿದ್ದಾರೆ? ಪ್ರಚಾರಕ್ಕೋಸ್ಕರ ಈ ರೀತಿ ಮಾಡಿ ರಾಜಕೀಯ ನಾಯಕರ ಭವಿಷ್ಯ ಹಾಳು ಮಾಡಿದ್ದಾರೆ ಎಂದು ಆಕ್ರೋಶಗೊಂಡರು.
ನಾವು ಸಾರ್ವಜನಿಕರಿಂದ ಆಯ್ಕೆಯಾದವರು. ಈ ತರಹದ ಸುಮಾರು ಟ್ರ್ಯಾಪ್ಗಳನ್ನು ನೋಡಿದ್ದೇವೆ. ನಾವು ಎಷ್ಟರ ಮಟ್ಟಿಗೆ ಇರಬೇಕೆಂದು ನಾವು ಅರ್ಥಮಾಡಿಕೊಳ್ಳಬೇಕು. ಇದೀಗ ರಮೇಶ್ ಜಾರಕಿಹೊಳಿಯನ್ನೇ ಟ್ರ್ಯಾಪ್ ಮಾಡಿದ್ದಾರೆ ಎಂದರು.
ಬೇರೆ ಸಚಿವರು ಯಾಕೆ ಕೋರ್ಟ್ಗೆ ಹೋಗಿ ಸ್ಟೇ ತೆಗೆದುಕೊಂಡರು?, ಎಲ್ಲವನ್ನೂ ಸರ್ಕಾರ ತನಿಖೆ ಮಾಡಬೇಕು. ನಿಜವಾದ ತಪ್ಪಿತಸ್ಥರನ್ನು ಕಂಡುಹಿಡಿಯಬೇಕು ಎಂದು ಆಗ್ರಹಿಸಿದರು.
ಯಾರೂ ಬಂದು ಅನ್ಯಾಯ ಆಗಿದೆ ಎಂದು ಕಂಪ್ಲೆಂಟ್ ಕೊಟ್ಟಿಲ್ಲ. ರೇಪ್ ಆಗಿದೆ ಅಂತನೂ ಯಾರೂ ದೂರು ಕೊಟ್ಟಿಲ್ಲ. ಕಂಪ್ಲೆಂಟ್ ಕೊಟ್ಟಿರುವುದು ಬೇರೆಯವರು. ಇದು ಯಾಕೆ, ಏನು ಎಂದು ತನಿಖೆ ಮಾಡಬೇಕು ಎಂದರು.
ಬ್ಲ್ಯಾಕ್ ಮೇಲ್ ಮಾಡುವುದು, ವ್ಯಾಪಾರೀಕರಣ ಮಾಡುವುದು ಎಷ್ಟು ಸರಿ? ಇವತ್ತಿನ ದಿನಗಳಲ್ಲಿ ವಿಶೇಷವಾಗಿ ರಾಜಕಾರಣಿಗಳನ್ನೇ ಟಾರ್ಗೆಟ್ ಮಾಡ್ತಿದ್ದಾರೆ ಎಂದು ಕಿಡಿಕಾರಿದರು.