ಮಂಡ್ಯ : ಡ್ರಗ್ಸ್ ಕೇಸ್ ರೀತಿಯೇ ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರ ಸಿಡಿ ಪ್ರಕರಣ ಕೂಡ ಹಳ್ಳ ಹಿಡಿಯುತ್ತಿದೆ ಎಂದು ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್ಸ್ ಪ್ರಕರಣವನ್ನು ಗುಡ್ಡ ಅಗೆದು ಇಲಿ ಹಿಡಿಯುವ ಹಾಗೆ ಮಾಡಿದರು. ಆದರೆ, ಬೇಕಾದವರನ್ನು ಬಿಟ್ಟು ಬೇಡದವರನ್ನು ಹಿಡಿದರು. ಅದೇ ರೀತಿ ರಮೇಶ್ ಜಾರಕಿಹೊಳಿಯವರ ಪ್ರಕರಣ ಕೂಡ ಹಳ್ಳ ಹಿಡಿಯುತ್ತದೆ ಎಂದು ವ್ಯಂಗ್ಯವಾಡಿದರು.
ಪೊಲೀಸರು ಸರ್ಕಾರದ ಅನ್ನ ತಿನ್ನುತ್ತಿದ್ದೇವೆ ಅಂದರೆ ಅವರು ಜಾರಕಿಹೊಳಿಯನ್ನು ಬಂಧಿಸಬೇಕಿತ್ತು. ಆದರೆ, ಈವರೆಗೆ ಬಂಧಿಸುವ ಕೆಲಸ ಆಗಿಲ್ಲ ಎಂದು ಖಾರವಾಗಿ ಮಾತನಾಡಿದರು. ಮುಖ್ಯಮಂತ್ರಿಗಳು ಅತ್ಯಾಚಾರಿ ಆರೋಪಿಯನ್ನು ಚುನಾವಣಾ ಪ್ರಚಾರಕ್ಕೆ ಬರಬೇಕು ಎಂದು ಕರೆದಿದ್ದಾರೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದರು.
ಇಂತಹ ಸಂದರ್ಭದಲ್ಲಿ ಈ ಕೇಸ್‌ಗೆ ನ್ಯಾಯ ಹೇಗೆ ಸಿಗುತ್ತದೆ. ಈ ಪ್ರಕರಣ ಖಂಡಿತ ಹಳ್ಳ ಹಿಡಿಯುತ್ತದೆ. ನಾವು ಕೋರ್ಟ್‌ನಲ್ಲಿ ಈ ಬಗ್ಗೆ ಖಾಸಗಿ ಕೇಸ್ ಹಾಕಿ ಸಿಬಿಐಗೆ ವಹಿಸಲು ಹೋರಾಟ ಮಾಡುತ್ತೇವೆ ಎಂದರು.
ಓದಿ: ಸಾಮಾನ್ಯರನ್ನು ಕೂಡಲೇ ಬಂಧಿಸ್ತೀರಿ, ವಿಐಪಿಯನ್ನು ಕೂಡ ಅರೆಸ್ಟ್ ಮಾಡಿ ಶಕ್ತಿ ಪ್ರದರ್ಶಿಸಲಿ : ವಕೀಲ ಜಗದೀಶ್
ಕುಮಾರಸ್ವಾಮಿ ಸರ್ಕಾರ ಬಂದಾಗ ಈ ಕೇಸ್ ಬಗ್ಗೆ ಸಿಬಿಐ ತನಿಖೆ ಮಾಡಿಸುತ್ತೇವೆ. ಸಂತ್ರಸ್ತೆಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ. ಎಸ್‌ಐಟಿ ಅವರು ಸರಿಯಾಗಿ ಕೆಲಸ ಮಾಡುತ್ತಾರೆ ಎಂದು ಗ್ಯಾರಂಟಿ ಇಲ್ಲ.
ಎಸ್‌ಐಟಿ ಇರುವುದು ನೋಡಿದ್ರೆ ರಮೇಶ್ ಜಾರಕಿಹೊಳಿಗೆ ಕ್ಲೀನ್ ಚಿಟ್ ಸಿಗುತ್ತದೆ. ಅತ್ಯಾಚಾರಿ ಆರೋಪಿಯಾಗಿರುವವರು ತಲೆ ತಗ್ಗಿಸಿಕೊಂಡು ಇರಬೇಕು. ಆದರೆ, ಸರ್ಕಾರನೇ ಬೀಳಿಸುತ್ತೇನೆ ಎಂದು ಬೆದರಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.