ಮಂಡ್ಯ: ಸುಮಲತಾ ಅವರಿಗೆ ಯಾರು ವೋಟ್ ಹಾಕಿದ್ದಾರೆ ಅವರ ಮನೆಗೆ ಹೋಗಿ ಊಟ ಮಾಡಲಿ. ಆದರೆ, ನಾವು ಅವರನ್ನು ಜೆಡಿಎಸ್ ಕಚೇರಿಗೆ ಕರೆಯುವುದಿಲ್ಲ. ಅವರನ್ನು ಕರೆದುಕೊಳ್ಳಲು ಕಾಯ್ದು ಕುಳಿತಿರುವವರು ಕಾಂಗ್ರೆಸ್, ಬಿಜೆಪಿಯವರು ಎಂದು ಮಾಜಿ ಸಂಸದ ಶಿವರಾಮೇಗೌಡ ಸಂಸದೆ ಸುಮಲತಾಗೆ ಟಾಂಗ್ ನೀಡಿದರು.
ಜೆಡಿಎಸ್ನವರಿಗೆ ಸುಮಲತಾ ಹೆಸರೇಳಿಕೊಂಡು ರಾಜಕೀಯ ಮಾಡುವ ದುಃಸ್ಥಿತಿ ಬಂದಿಲ್ಲ ಎಂದು ಅವರು ಮಂಡ್ಯದಲ್ಲಿ ಹೇಳಿದ್ದಾರೆ. ಸುಮಲತಾ ಅವರು ರಾಜಕೀಯಕ್ಕೆ ಬರುವುದಕ್ಕೂ ಮುಂಚೆ ರಾಜಕೀಯ ಮಾಡಿದ್ದೇವೆ. ರೈತರು ಸಮಸ್ಯೆ ಹೇಳಿಕೊಂಡಾಗ ಸುಮಲತಾ ಅವರು ಈ ವಿಚಾರದ ಬಗ್ಗೆ ಕ್ರಮ ತೆಗೆದುಕೊಳ್ಳಲಿ ಎಂದಿದ್ದೇನೆ. ಅದಕ್ಕೆ ಭಾಷಣ ಮಾಡಿ ಹೋಗ್ತಾರೆ ಶಿವರಾಮೇಗೌಡ ಹೇಳಿದ್ದಾರೆ.
ಮೈಷುಗರ್ ಕಾರ್ಖಾನೆಗೆ ಹಣ ನೀಡಿದ್ರೆ ಅಧ್ಯಕ್ಷರು ಜೇಬು ತುಂಬುತ್ತೆ. ಹಳೇ ಕಾರ್ಖಾನೆಗೆ ಹಣ ನೀಡುವ ಬದಲು, ಹೊಸ ಕಾರ್ಖಾನೆ ಮಾಡುವಂತೆ ಒತ್ತಾಯಿಸಿದ್ದೆ. ಹೊಸ ಕಾರ್ಖಾನೆಗೆ ಕುಮಾರಸ್ವಾಮಿ ಸಂಕಲ್ಪದಂತೆ ಯಡಿಯೂರಪ್ಪ ಕೂಡ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ನಮ್ಮಿಂದ ತಪ್ಪಾಗಿದೆ, ನೀವು ಅಧಿಕಾರದಲ್ಲಿದ್ದೀರಿ ಸಮಸ್ಯೆ ಬಗೆಹರಿಸಿ. ಅದನ್ನು ಬಿಟ್ಟು ಕೆಸರೆರಚಾಡಿಕೊಂಡ್ರೆ ಪ್ರಯೋಜನವಿಲ್ಲ. ಸಂಸದರೂ ತಮ್ಮ ಕೆಲಸ ಮಾಡಬೇಕು. ಶಾಸಕರೂ ತಮ್ಮ ಕೆಲಸ ಮಾಡಬೇಕು. ಶಾಸಕರು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು ನಮ್ಮ ಶಾಸಕರು ಹಾಗೆ ಮಾಡುವುದಿಲ್ಲ ಎಂದರು.
ಕೆ.ಆರ್.ಪೇಟೆಗೆ ಹೋದ್ರೆ ಬಿಜೆಪಿ ಜೊತೆ, ನಾಗಮಂಗಲಕ್ಕೆ ಬಂದ್ರೆ ಕಾಂಗ್ರೆಸ್ ಜೊತೆ ಹೋಗ್ತಾರೆ. ತಮ್ಮದು ಯಾವ ಪಾರ್ಟಿ ಎಂದು ಸುಮಲತಾ ಅವರು ಮೊದ್ಲು ತೀರ್ಮಾನ ಮಾಡಲಿ. ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಅವರು ಸ್ವಾಭಿಮಾನದ ಹೆಸರಿನಲ್ಲಿ ಹೋರಾಡಿದ್ರು. ಈಗ ಸುಮಲತಾ ಅವರು ಯಾರಿಗೆ ಎಷ್ಟೆಷ್ಟು ಪಾಲು ಕೊಡ್ತಾರೆ ನೋಡಬೇಕು ಎಂದು ಲೇವಡಿ ಮಾಡಿದರು.