ಕೆ.ಆರ್.ಪೇಟೆ: ಉಪಚುನಾವಣೆ ಕಣದಲ್ಲೂ ಕುಮಾರಣ್ಣ ಕಣ್ಣೀರಾಧಾರೆ ಹರಿಸಿ ಮತ ಬೇಟೆ ಆರಂಭಿಸಿದ್ದಾರೆ. ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಭರ್ಜರಿ ರೋಡ್ ಶೋ ನಡೆಸಿ, ಕಾರ್ಯಕರ್ತರಿಗೆ ಹುರಿದುಂಬಿಸಿದ ಹೆಚ್‌ಡಿಕೆ, ತಮಗಾದ ಮೋಸದ ಬಗ್ಗೆ ವಿವರಿಸುತ್ತಾ ದಿಢೀರ್ ಭಾವುಕರಾಗಿ ಕಣ್ಣೀರು ಸುರಿಸಿದರು.
ಕೆ.ಆರ್.ಪೇಟೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಅದರಲ್ಲೂ ಜೆಡಿಎಸ್ ಅಭ್ಯರ್ಥಿ ಪರ ಮೊದಲ ಬಾರಿಗೆ ಕುಮಾರಸ್ವಾಮಿ ಅಖಾಡಕ್ಕೆ ಧುಮುಕಿದ್ದಾರೆ. ಕ್ಷೇತ್ರಕ್ಕೆ ಆಗಮಿಸುತ್ತಿದ್ದಂತೆ ತಮಗೆ ಮೋಸ ಆಗಿದೆ ಎಂದು ಕಾರ್ಯಕರ್ತರಿಗೆ ವಿವರಣೆ ನೀಡುವ ಸಂದರ್ಭದಲ್ಲಿ ಹೆಚ್‌ಡಿಕೆ ಕಣ್ಣೀರಿಟ್ಟಿದ್ದಾರೆ. ಅಂದು ನಾರಾಯಣಗೌಡ ಕುಮಾರಸ್ವಾಮಿ ಗೆ ಬರೆದ ಪತ್ರ ಓದುತ್ತಾ ಕಣ್ಣೀರು ಹಾಕಿ, ಬಿಜೆಪಿ ಅಭ್ಯರ್ಥಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದರ ಜೊತೆಗೆ ಮಾಜಿ ಡಿಸಿಎಂ ಡಾ. ಪರಮೇಶ್ವರ್, ಮಾಜಿ ಸಚಿವ ಚಲುವರಾಯಸ್ವಾಮಿ ವಿರುದ್ಧವೂ ಗುಡುಗಿದರು. ಅಮೆರಿಕಕ್ಕೆ ಹೋದಾಗ ಸರ್ಕಾರ ಕೆಡವಿದರು ಎಂದು ನೋವನ್ನು ತೋಡಿಕೊಂಡರು.
ಇನ್ನು ಮಾಜಿ ಸಚಿವ ಪುಟ್ಟರಾಜು ಬಹಿರಂಗ ಸಭೆಯಲ್ಲಿ ಮಾತನಾಡುತ್ತ, ಬಿಜೆಪಿ ಅಭ್ಯರ್ಥಿಯು ಜೆಡಿಎಸ್ ಮುಖಂಡರನ್ನು ಕೊಂಡುಕೊಂಡ ಬಗ್ಗೆ ಹೇಳುತ್ತಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸಿ ಎಂದು ಮತದಾರರಿಗೆ ಕರೆ ನೀಡಿದ್ರು.
ಹೆಚ್ ಡಿ ಕುಮಾರಸ್ವಾಮಿ, ಹೆಚ್ ಡಿ ರೇವಣ್ಣ ಸೇರಿದಂತೆ ಹಲವು ಮುಖಂಡರು ಕಿಕ್ಕೇರಿಯಲ್ಲಿ ರೋಡ್ ಶೋ ಮಾಡಿ ಸಂತೆ ಬಾಚಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ತಮ್ಮ ಅಭ್ಯರ್ಥಿ ಪರ ಅಬ್ಬರದ ಪ್ರಚಾರ ಕೈಗೊಂಡ್ರು.