ಮಂಡ್ಯ: ಕಲಬುರಗಿ ಪಾಲಿಕೆ ಚುನಾವಣೆ ವಿಚಾರದಲ್ಲಿ ಬೆಂಬಲ ವಿಚಾರ ಹೇಳಲು ಇನ್ನೂ ಟೈಂ ಇದೆ ಎಂದು ಮಾಜಿ ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಗೌಪ್ಯತೆ ಕಾಪಾಡಿದ್ದಾರೆ. ಯಾರಿಗೆ ಬೆಂಬಲ ನೀಡುತ್ತೇವೆ ಎಂಬುದರ ಬಗ್ಗೆ ತಿಳಿಸದೇ ಮೌನವಹಿಸಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಕ್ಕಾಗಿ ಕಾದು ಕುಳಿತಿದ್ದು, ಸಹ ದಳಪತಿಗಳ ದಾಳ ನಿಗೂಢವಾಗುತ್ತಿದೆ.
ಕೀಲಾರ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಬಲ ನೀಡುವುದಕ್ಕೆ ಏನು ಅರ್ಜೆಂಟ್ ಇಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸಂಜೆ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ: ಇಂದಿನ ಅಧಿವೇಶನದಲ್ಲಿ ಯಾವುದೇ ಬ್ಯುಸಿನೆಸ್ ಮಾಡುವುದಿಲ್ಲ ಎಂದ ಅವರು, ಸಂಜೆ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದು, ಅವರೊಂದಿಗೆ ಯಾವೆಲ್ಲ ವಿಷಯ ಚರ್ಚಿಸಬೇಕು ಎಂದು ನಿರ್ಧರಿಸುವೆ ಎಂದರು.
ಅಕ್ರಮ ಗಣಿಗಾರಿಕೆ ನಿಲ್ಲಿಸುವಂತಹ ದೊಡ್ಡ ಸಾಮರ್ಥ್ಯ ಹೊಂದಿರುವವರು ಇದ್ದಾರೆ: ಅಧಿವೇಶನದಲ್ಲಿ ಮಂಡ್ಯ ಜೆಡಿಎಸ್ ಶಾಸಕರು ಜಿಲ್ಲೆಯ ಅಕ್ರಮ ಗಣಿಗಾರಿಗೆ ಬಗ್ಗೆ ಮಾತನಾಡುವೆ ಎನ್ನುವ ವಿಚಾರವಾಗಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಿಲ್ಲಿಸುವಂತಹ ದೊಡ್ಡ ಸಾಮರ್ಥ್ಯ ಹೊಂದಿರುವವರು ಇದ್ದಾರೆ. ಈ ಗೊಂದಲಗಳ ಮಧ್ಯೆ ನಾನು ಮೂಗು ತೂರಿಸುವುದು ಸೂಕ್ತವಲ್ಲ, ಇದೆಲ್ಲವನ್ನು ಸರಿಮಾಡುವ ಸಮರ್ಥರಿದ್ದಾರೆ ಸರಿಪಡಿಸುತ್ತಾರೆ ಎಂದು ಸಂಸದೆ ಸಮಲತಾಗೆ ಮಾಜಿ ಸಿಎಂ ಕುಮಾರಸ್ವಾಮಿ ಟಾಂಗ್ ನೀಡಿದರು.
29 ರಾಸುಗಳ ನಿಗೂಢ ಸರಣಿ ಸಾವು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಹೆಚ್ಡಿಕೆ: ಕೀಲಾರ ಗ್ರಾಮದ ರೈತ ಸಿದ್ದರಾಮೇಗೌಡ ಅವರ ಮನೆಯಲ್ಲಿ 29 ರಾಸುಗಳ ನಿಗೂಢ ಸರಣಿ ಸಾವು ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ರೈತನೊಂದಿಗೆ ಸಮಾಲೋಚನೆ ನಡೆಸಿದ್ದಾರೆ.
ಈವರೆಗೆ ಸಾವನಪ್ಪಿರುವ ರಾಸುಗಳು ಬಗ್ಗೆ ಮಾಹಿತಿ ಕಲೆ ಹಾಕಿದ ಮಾಜಿ ಮುಖ್ಯಮಂತ್ರಿ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿ ಸಾಂತ್ವನ ಹೇಳಿದರು. ಅಲ್ಲದೇ ರಾಸುಗಳ ನಿಗೂಢ ಸಾವಿನ ಬಗ್ಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ವೇಳೆ, ಶಾಸಕ ಎಂ.ಶ್ರೀನಿವಾಸ್, ವಿಧಾನಸಭಾ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಸಾಥ್ ನೀಡಿದರು.
ಇದನ್ನೂ ಓದಿ : ಸದನಕ್ಕೆ ಬರಲಿ ತಕ್ಕ ಉತ್ತರ ಕೊಡುತ್ತೇನೆ: ಎತ್ತಿನ ಬಂಡಿ ಪ್ರತಿಭಟನೆಗೆ ಸಿಎಂ ತಿರುಗೇಟು