ಮಂಡ್ಯ : ಮದ್ದೂರು ತಾಲೂಕಿನ ಗೆಜ್ಜಲಗೆರೆಯ ಮನ್‌ಮುಲ್ ಮೆಗಾ ಡೈರಿಯಲ್ಲಿ ಇಂದು ಅಗ್ನಿ ಅವಘಡ ಸಂಭವಿಸಿದೆ. ಡೈರಿಯ ಮೊದಲ ಅಂತಸ್ತಿನ ತುಪ್ಪ ಮತ್ತು ಕೋವಾ ಘಟಕದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿದೆ. ಬೆಳಗ್ಗೆ 7 ಗಂಟೆಯ ವೇಳೆಗೆ ಘಟನೆ ನಡೆದಿದ್ದು, ಸ್ಥಳೀಯ ನೌಕರರು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು.
ಅವಘಡದಿಂದ ಭಾರಿ ನಷ್ಟ ಸಂಭವಿಸಿದ್ದು, ಯಾವುದೇ ಪ್ರಾಣಾಪಾಯ ಆಗಿಲ್ಲವೆಂಬ ಮಾಹಿತಿ ಲಭ್ಯವಾಗಿದೆ. ಈ ಘಟನೆ ಕುರಿತು ಮಾತನಾಡಿರುವ ಮನ್ ಮುಲ್ ಎಂಡಿ ಮಂಜೇಶ್ ಅವರು, ನೂತನ ಡೈರಿಯ ಮೆಂಟೆನನ್ಸ್ ಮತ್ತು ಪ್ಯಾಕಿಂಗ್ ಮಟಿರಿಯಲ್ ರೂಮ್ನಲ್ಲಿ ಮಾತ್ರ ಅಗ್ನಿ ಅವಘಡ ಸಂಭವಿಸಿದೆ. ತಕ್ಷಣ ಎಚ್ಚೆತ್ತುಕೊಂಡ ಇಲ್ಲಿನ ಸಿಬ್ಬಂದಿಗಳು ಅಗ್ನಿಶಾಮಕ ದಳ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸಂಪೂರ್ಣ ಬೆಂಕಿ ನಂದಿಸುವ ಕೆಲಸವಾಗಿದೆ. ಘಟನೆಯಿಂದ ಹಾನಿಯಾಗಿರುವ ಎಲ್ಲಾದಕ್ಕೂ ವಿಮೆ ಕವರೇಜ್ ಆಗಿದೆ. ಒಂದು ವಾರದ ಬಳಿಕ ರಿಸ್ಟೋರ್ ಮಾಡುತ್ತೇವೆ ಎಂದರು.
ಶಾರ್ಟ್ ಸರ್ಕ್ಯೂಟ್ನಿಂದ ಘಟನೆ ಸಂಭವಿಸಿದೆ ಎಂಬುದು ಪ್ರಾಥಮಿಕವಾಗಿ ತಿಳಿದು ಬಂದಿದೆ. ಪ್ಯಾಕಿಂಗ್ ಬಾಕ್ಸ್ ಬೆಂಕಿಗೆ ತುತ್ತಾಗಿದ್ದು, ಅಪಾರ ಪ್ರಮಾಣದ ನಷ್ಟವೇನು ಆಗಿಲ್ಲ. ಪರಿಶೀಲನೆ ಮಾಡಿದ ಮೇಲೆ ಎಲ್ಲಾ ಸತ್ಯಾಂಶ ಗೊತ್ತಾಗುತ್ತದೆ ಎಂದು ಮನ್ ಮುಲ್ ಅಧ್ಯಕ್ಷ ಬೋರೆಗೌಡ ಅವರು ಹೇಳಿದರು.
ಬೆಳಗ್ಗೆ 7.45 ಮದ್ದೂರು ಅಗ್ನಿಶಾಮಕ ಠಾಣೆಗೆ ಮುನ್ ಮುಲ್ಯಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಕರೆ ಮಾಡಿ ತಿಳಿಸಿದರು. ಬಳಿಕ ಮದ್ದೂರು ಅಗ್ನಿಶಾಮಕ ಠಾಣೆ ಮತ್ತು ಮಂಡ್ಯ ಕಟ್ರೋಲ್ನಿಂದ ಘನಟೆ ಸ್ಥಳ ಬಂದು ನೋಡಿದಾಗ ಡೈರಿಯ ಮೊದಲ ಅಂತಸ್ತಿನಲ್ಲಿದ್ದ ತುಪ್ಪ, ಸ್ವೀಟ್ಸ್ ಬಾಕ್ಸ್ಗಳಿಗೆ ಸಂಪೂರ್ಣ ಬೆಂಕಿ ಬಿದ್ದಿತ್ತು. ತಕ್ಷಣ ನಮ್ಮ ಅಧಿಕಾರಿಗಳು ಬೆಂಕಿ ಬೇರೆ ಕಡೆ ಅವರಿಸುವುದನ್ನು ತಡೆದಿದ್ದಾರೆ. ಮೈಸೂರು, ಶ್ರೀರಂಗಪಟ್ಟಣ ಸೇರಿದಂತೆ ಏಳು ವಾಹನಗಳು ಬಂದು ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಸದ್ಯಕ್ಕೆ ಹೆಚ್ಚಿನ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಕೆ.ಪಿ ಗುರುರಾಜ್ ಅವರು ವಿವರಿಸಿದರು.
ನೂತನ ಮನ್ ಮುಲ್ನ ಮೆಗಾಡೈರಿ ಕಟ್ಟಡವನ್ನು 2022 ಡಿಸೆಂಬರ್ 31ರಂದು ಕೇಂದ್ರ ಸಚಿವ ಅಮಿತ್ ಶಾ ಉದ್ಘಾಟನೆ ಮಾಡಿದ್ದರು. ಆದರೆ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿರೋ ಕಟ್ಟಡಕ್ಕೆ ಅಗ್ನಿಶಾಮಕ ದಳದಿಂದ ಆಕ್ಷೇಪಣೆ ಪ್ರಮಾಣಪತ್ರ(ಎನ್ಒಸಿ)ವನ್ನೇ ಪಡೆದಿಲ್ಲ. ಎನ್ಒಸಿ ಪಡೆಯದೇ ಕಟ್ಟಡವನ್ನು ಕಟ್ಟಿ ಕೇಂದ್ರ ಸಚಿವರ ಕೈಯಲ್ಲಿ ಉದ್ಘಾಟನೆ ಮಾಡಿಸಲಾಗಿದೆ. 2016 ರ ನಿಯಮದಂತೆ ಯಾವುದೇ ಕಟ್ಟಡ ನಿರ್ಮಾಣಕ್ಕೂ ಮೊದಲು ಎನ್ಒಸಿ ಪಡೆಯುವುದು ಕಡ್ಡಾಯವಾಗಿದ್ದು, ಡೈರಿ ಸುರಕ್ಷತೆ ಬಗ್ಗೆ ಮಾತ್ರ ಕ್ರಮ ತೆಗೆದುಕೊಳ್ಳಲಾಗಿದೆ. ಆದರೆ ಅಗ್ನಿಅವಘಡದ ಬಗ್ಗೆ ಮುಂಜಾಗ್ರತ ಕ್ರಮಗಳನ್ನು ಆಡಳಿತ ಮಂಡಳಿ ತೆಗೆದುಕೊಂಡಿಲ್ಲ.
ಇದನ್ನೂ ಓದಿ : ನೆಲಮಂಗಲ : ಹೊತ್ತಿ ಉರಿದ ಕಾರು, 50 ಸಾವಿರ ರೂಪಾಯಿ ನಗದು ಭಸ್ಮ