ಮಂಡ್ಯ: ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುವುದನ್ನು ಖಂಡಿಸಿ, ಜಲಾಶಯ ಅವಲಂಬಿತ ಎಲ್ಲ ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ಕೆಆರ್‌ಎಸ್ ಕಾವೇರಿ ನೀರಾವರಿ ನಿಗಮ ಕಚೇರಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಿದರು.
ಶ್ರೀರಂಗಪಟ್ಟಣ, ಮದ್ದೂರು ತಾಲೂಕುಗಳ ರೈತರು ಬೈಕ್ ಹಾಗೂ ವಾಹನಗಳ ಮೂಲಕ ಕೆಆರ್‌ಎಸ್‌ಗೆ ಆಗಮಿಸಿ ನೀರಾವರಿ ಕಚೇರಿಗೆ ಮುತ್ತಿಗೆ ಹಾಕಿದರು. ರಾಜ್ಯ ಹಾಗೂ ಕೇಂದ್ರ ಸರ್ಕಾರ, ಕಾವೇರಿ ನೀರಾವರಿ ನಿಗಮ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಎರಡು ಗಂಟೆಗೂ ಹೆಚ್ಚು ಕಾಲ ಧರಣಿ ನಡೆಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ ಮಾತನಾಡಿ, ಜಲಾಶಯದ ನೀರನ್ನು ಮೊದಲು ಈ ಭಾಗದ ರೈತರ ಕೃಷಿ ಭೂಮಿಗೆ ಒದಗಿಸಬೇಕು. ಜಲಾಶಯ ಭರ್ತಿಗೂ ಮುನ್ನ ತಮಿಳುನಾಡಿಗೆ ನೀರು ಹರಿಸುವ ಕ್ರಮ ಸರಿಯಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈ ಭಾಗದ ರೈತರ ಹಿತ ಕಾಯಲು ಕಟಿಬದ್ಧರಾಗಿರಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ತಕ್ಷಣ ನೀರು ಹರಿಸದಿದ್ದರೆ ಕಬ್ಬು ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ತಮಿಳುನಾಡಿಗೆ ನೀರು ಹರಿಸುವುದನ್ನು ಕೂಡಲೇ ನಿಲ್ಲಿಸಬೇಕು. ಇಂದಿನಿಂದಲೇ ಎಲ್ಲ ನಾಲೆಗಳಿಗೆ ನೀರು ಹರಿಸಬೇಕು. ಇಲ್ಲದಿದ್ದರೆ ಅಹೋರಾತ್ರಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ರವಾನಿಸಿದರು.
ಇದನ್ನೂ ಓದಿ: ಸಾರಿಗೆ ನೌಕರರಿಗೆ ಬಿಗ್ ಶಾಕ್.. ವರ್ಷಪೂರ್ತಿ ಮುಷ್ಕರಕ್ಕೆ ಸರ್ಕಾರದ ಕೊಕ್ಕೆ
ಸ್ಥಳಕ್ಕಾಗಮಿಸಿದ ಮಂಡ್ಯ ವೃತ್ತದ ಕಾವೇರಿ ನೀರಾವರಿ ನಿಗಮ ಎಇಇ ಹೊನ್ನೇಗೌಡ ಜಲಾಶಯ ಗೇಟುಗಳ ದುರಸ್ತಿ ಕಾರ್ಯ ನಡೆಯುತ್ತಿದೆ. ಹಾಗಾಗಿ ನಾಲೆಗಳಿಗೆ ನೀರು ಹರಿಸುವುದು ತಡವಾಗುತ್ತದೆ ಎಂದರು.