ಮಂಡ್ಯ: ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಭಾರಿ ಪ್ರಮಾಣದ ಸ್ಪೋಟಕಗಳನ್ನು ಈ ಹಿಂದೆ ಮಂಡ್ಯ ಪೊಲೀಸರು ವಶಪಡಿಸಿಕೊಂಡಿದ್ದರು. ಬಳಿಕ ಮ್ಯಾಗಜಿನ್ ಹೌಸ್‌ನಲ್ಲಿ ಸುರಕ್ಷಿತವಾಗಿ ಇರಿಸಲಾಗಿತ್ತು. ಆದರೆ ಇದೀಗ ಸ್ಫೋಟಕಗಳು ನಾಪತ್ತೆಯಾಗಿದ್ದು, ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ಜನವರಿ 21 ರಂದು ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನ ಅಕ್ಕಿಹೆಬ್ಬಾಳದ ಬಳಿ ಟಾಟಾ ಗೂಡ್ಸ್ ವಾಹನದಲ್ಲಿ ಕಲ್ಲು ಗಣಿಗಾರಿಕೆಗೆ ಬಳಸುವ ಅಪಾಯಕಾರಿ ಸ್ಫೋಟಕಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಇದರ ಖಚಿತ ಮಾಹಿತಿ ಮೇರೆಗೆ ಕೆ.ಆರ್ ಪೇಟೆ ಪೊಲೀಸರು ದಾಳಿ ನಡೆಸಿದ್ದು, ವಾಹನ ಪರಿಶೀಲನೆ ಮಾಡಿದಾಗ 6 ಸಾವಿರ ಎಲೆಕ್ಟ್ರಿಕ್ ಡಿಟೋವೇಟರ್, 800 ನಾನ್ ಎಲೆಕ್ಟ್ರಿಕಲ್ ಡಿಟೋನೇಟರ್, 14,430 ಜಿಲೆಟಿನ್ ಕಡ್ಡಿಗಳನ್ನು ಪತ್ತೆಯಾಗಿದ್ದವು. ಬಳಿಕ ಇಬ್ಬರನ್ನು ಬಂಧಿಸಿ ವಶಪಡಿಸಿಕೊಂಡ ಸ್ಫೋಟಕಗಳನ್ನು ಸುರಕ್ಷಿತವಾಗಿ ಪಾಂಡವಪುರ ತಾಲೂಕು ರಂಗನಕೊಪ್ಪಲು ಗ್ರಾಮದ ಕೆ.ನಾಜೀಮುಲ್ಲಾ ಷರೀಫ್ ಎಂಬುವರಿಗೆ ಸೇರಿದ ಮ್ಯಾಗಜೀನ್ ಹೌಸ್‌ನಲ್ಲಿ ಇರಿಸಲಾಗಿತ್ತು.
ಸ್ಫೋಟಕಗಳನ್ನು ನಾಶಪಡಿಸಲು ಜೂನ್ 18ರಂದು ಬಿಡಿಡಿಎಸ್ ತಂಡ ಮ್ಯಾಗಜೀನ್ ಹೌಸ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ 6 ಸಾವಿರ ಎಲೆಕ್ಟ್ರಿಕ್ ಡಿಟೋನೇಟರ್ ಪೈಕಿ 4 ಸಾವಿರ ಎಲೆಕ್ಟ್ರಿಕ್ ಡಿಟೋನೇಟರ್‌ಗಳು, 800 ನಾನ್ ಎಲೆಕ್ಟ್ರಿಕ್ ಡಿಟೋನೇಟರ್‌ಗಳಲ್ಲಿ ಪೈಕಿ 500 ಎಲೆಕ್ಟ್ರಿಕ್ ಡಿಟೋನೇಟರ್ ಹಾಗೂ 14,400 ಜಿಲೆಟಿನ್ ಕಡ್ಡಿ ಮಾಯವಾಗಿತ್ತು.
ಇನ್ನು ಮ್ಯಾಗಜೀನ್ ಹೌಸ್ ಮಾಲೀಕ ಕೆ. ನಾಜೀಮುಲ್ಲಾ ಷರೀಫ್ ಎಂಬಾತ ಸ್ಫೋಟಕ ಮಾರಾಟ ಮಾಡಿಕೊಂಡಿದ್ದಾನೆಂದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಇನ್ನೊಂದೆಡೆ ದೊಡ್ಡ ಪ್ರಮಾಣದ ಸ್ಫೋಟಕ ಮಾರಾಟದಲ್ಲಿ ಪೊಲೀಸರು ಶಾಮೀಲಾಗಿದ್ದಾರೆ ಎಂದು ಆರ್ಟಿಐ ಕಾರ್ಯಕರ್ತ ಕೆ.ಆರ್ ರವೀಂದ್ರ ಗಂಭೀರ ಆರೋಪ ಮಾಡಿದ್ದು, ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.