ಮಂಡ್ಯ: ಮಳವಳ್ಳಿಯಲ್ಲಿ ಜೂಜು ದಂಧೆ ತಡೆಯುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಮಾಜಿ ಸಚಿವ ನರೇಂದ್ರ ಸ್ವಾಮಿ ಖಾಕಿ ವಿರುದ್ಧ ಆರೋಪಿಸಿದರು.
ಮಂಡ್ಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲಾಡಳಿತ, ಜನಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ? ಮಳವಳ್ಳಿಯಲ್ಲಿ ಇಲಾಖೆಗಳು ಏನು ಕೆಲಸ ಮಾಡುತ್ತಿವೆ? ಎಂದು ಪ್ರಶ್ನಿಸಿದ್ರು. ಕೆಲವು ಅಧಿಕಾರಿಗಳು ತೆರೆಮರೆಯಲ್ಲಿ ಶಾಮೀಲಾಗಿದ್ದಾರೆ, ನಾನು ಸೂಕ್ಷ್ಮತೆ ಹೇಳಿದ್ದೇನೆ ಎಂದು ಎಚ್ಚರಿಸಿದರು.
ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು:
ಸಾರ್ವಜನಿಕರ ಬಾಯಿಯಲ್ಲಿ ನೋವಿನ ಬಗ್ಗೆ ಮಾತುಗಳು ಕೇಳಿ ಬರುತ್ತಿದೆ. ಆಡಳಿತದಲ್ಲಿರುವವರು ಹಾಗೂ ಅಧಿಕಾರಿಗಳ ವರ್ಗ ಇದರ ಬಗ್ಗೆ ಜವಾಬ್ದಾರಿಯಾಗಿ ಗಮನಹರಿಸಬೇಕಿದೆ. ಯಾರೋ ಒತ್ತಡಕ್ಕೆ ಮಣಿದು ಕೆಲಸ ಮಾಡಲು ಸಾಧ್ಯವಾಗಲ್ಲ ಎಂದು ಹೇಳಿದರು.
ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ:
ಎಲ್ಲಾ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಮಧ್ಯವರ್ತಿಗಳ ಹಾವಳಿಯಿಂದ ಜನರು ತತ್ತರಿಸಿದ್ದಾರೆ. ಲೂಟಿ, ದರೋಡೆ, ಕೊಲೆ, ಸುಲಿಗೆ ಎಲ್ಲಾ ಅರಾಜಕತೆಯ ಸಂಕೇತವಾಗುತ್ತಿದೆ. ವ್ಯಕ್ತಿ ಹಣ ಇದ್ದಾಗ ಜೂಜಾಡುತ್ತಾನೆ, ಹಣ ಇಲ್ಲದಿದ್ದಾಗ ಹಲವು ಸಮಾಜಘಾತುಕ ಕೃತ್ಯಗಳಿಗೆ ಇಳಿಯುತ್ತಾನೆ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಕಾನೂನು ಸುವ್ಯವಸ್ಥೆ, ಆಡಳಿತ ವಿಚಾರವನ್ನು ಮೊದಲು ಚರ್ಚಿಸಲಿ:
ಕಾನೂನು ಸುವ್ಯವಸ್ಥೆ, ಆಡಳಿತ ವಿಚಾರದಲ್ಲಿ ಮೊದಲು ಜಿಲ್ಲಾಡಳಿತ ಕುಳಿತು ಚರ್ಚೆ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಾರ್ವಜನಿಕ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡುತ್ತಾರೆ. ಸಮಯ ಬಂದರೆ, ಸಾಕ್ಷಾಧಾರ ಸಹಿತ ಸೂಕ್ತ ವೇದಿಕೆಯಲ್ಲಿ ಪ್ರಶ್ನೆ ಮಾಡಲಾಗುತ್ತದೆ ಎಂದರು.
ಎಲ್ಲವನ್ನೂ ಪಟ್ಟಿ ಮಾಡಲಾಗುತ್ತಿದೆ, ಕೆಲವೊಂದು ವಿಡಿಯೋಗಳನ್ನ ಸಹ ಪಡೆದುಕೊಂಡಿದ್ದೇನೆ. ಸಾಂದರ್ಭಿಕವಾಗಿ ಈ ವಿಚಾರದಲ್ಲಿ ಹೋರಾಟ ನಡೆಯುತ್ತದೆ. ಅಲ್ಲದೇ ಈ ವಿಚಾರವಾಗಿ ಜಿಲ್ಲಾಡಳಿತ ಕ್ರಮ ವಹಿಸಬೇಕು ಎಂದು ಪರೋಕ್ಷವಾಗಿ ಜೆಡಿಎಸ್ ಶಾಸಕ ಹಾಗೂ ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದರು.