ಮಂಡ್ಯ: ರಾಜ್ಯದಲ್ಲಿ ಬಿಜೆಪಿ ಪಕ್ಷ ಮುಳುಗುತ್ತಿರುವ ಹಡಗು. ಆದ್ದರಿಂದ ಯಾರೂ ಸಹ ಪಕ್ಷವನ್ನು ಬಿಟ್ಟು ಎಲ್ಲಿಗೂ ಹೋಗುವುದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದ ಐದು ಶಾಸಕರು ರಾಜೀನಾಮೆ ನೀಡುವ ಬಗ್ಗೆ ಸಚಿವ ರಮೇಶ್ ಜಾರಕಿಹೊಳಿ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದರು.
ಮದ್ದೂರಿನಲ್ಲಿ ಮದ್ದೂರು ವಡೆ ಸವಿದು, ಟೀ ಕುಡಿದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಎಸ್.ವೈ ಪುತ್ರ ವಿಜಯೇಂದ್ರ ಮುಂದಿನ ರಾಜಾಹುಲಿ ಎಂಬ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ ಯಾರು ಏನು ಬೇಕಾದರೂ ಹೊಗಳಬಹುದು. ಆದ್ರೆ ವಿಜಯೇಂದ್ರ ಭ್ರಷ್ಟಾಚಾರದಲ್ಲಿ ರಾಜಾಹುಲಿ. ಕೆಲವರು ಹೊಗಳಿಕೆ ಭಟ್ಟರಂತೆ ಕೆಲಸ ಮಾಡುತ್ತಾರೆ ಅದಕ್ಕೆ ನಾವು ಏನು ಮಾಡೋಕು ಸಾಧ್ಯವಿಲ್ಲ ಎಂದರು.
ಮೀಸಲಾತಿ ವಿಚಾರವಾಗಿ ರಾಜ್ಯದಲ್ಲಿ ನಡೆಸುತ್ತಿರುವ ಹೋರಾಟದಲ್ಲಿ ವಿಜಯೇಂದ್ರ ಕೈವಾಡ ವಿಚಾರಕ್ಕೆ ಮಾತನಾಡಿದ ಅವರು, ಬಸವನಗೌಡ ಯತ್ನಾಳ್ ಯಾವ ಪಕ್ಷದವರು? ಅವರು ಸತ್ಯವನ್ನೇ ಹೇಳುತ್ತಾರೆ. ಯತ್ನಾಳ್ ಅವರನ್ನು ಕೇಳಿ ಎಂದು ಹೇಳಿದರು.
ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿ ಇನ್ನಿತರ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಆದ್ರೆ ಈ ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗದೆ ನಿರ್ಲಕ್ಷ್ಯ ವಹಿಸಿದೆ ಎಂದು ಕಿಡಿಕಾರಿದರು.
ಆದಷ್ಟು ಬೇಗ ಈ ಬಿಜೆಪಿ ಸರ್ಕಾರ ತೊಲಗಬೇಕು ಅಂತಾ ರಾಜ್ಯದ ಜನ ಬಯಸುತ್ತಿದ್ದಾರೆ. ಸದ್ಯ ಎದುರಾಗಿರುವ ಉಪ ಚುನಾವಣೆಗೆ ಕಾಂಗ್ರೆಸ್ ಪಕ್ಷ ಅಗತ್ಯ ಸಿದ್ಧತೆ ಕೈಗೊಂಡಿದೆ. ನಮ್ಮ ಪಕ್ಷ ಸಹ ಉಪಚುನಾವಣೆ ಎದುರಿಸಲು ತಯಾರಾಗಿದೆ ಎಂದರು.