ಮಂಡ್ಯ: ಡ್ರಗ್ಸ್ ವಿಚಾರವಾಗಿ ಸಿಸಿಬಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ತನಿಖೆ ಇನ್ನು ಅಂತಿಮವಾಗಿಲ್ಲ. ಡ್ರಗ್ಸ್ ದಂಧೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂದು ಜೆಡಿಎಸ್ ಶಾಸಕ ಡಾ. ಕೆ. ಅನ್ನದಾನಿ ಆಗ್ರಹಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈಗಾಗಲೇ ಇಬ್ಬರು ನಟಿಯರನ್ನು ನ್ಯಾಯಾಂಗ ಬಂಧನದಲ್ಲಿರಿಸಿದ್ದಾರೆ. ಈ ಡ್ರಗ್ಸ್ ಜಾಲದ ಬಗ್ಗೆ ಬಹಳಷ್ಟು ಕಡೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಡ್ರಗ್ಸ್ ಯುವಕರಿಗೆ ಮಾರಕ. ಈ ಜಾಲವನ್ನ ಸರ್ಕಾರ ಹತ್ತಿಕ್ಕಬೇಕು. ಡ್ರಗ್ಸ್ ಜಾಲದಲ್ಲಿ ಯಾರ್ಯಾರು ಭಾಗಿಯಾಗಿದ್ದಾರೋ ಅವರ ಮೇಲೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ಇನ್ನು ಕೋವಿಡ್ ಹಗರಣ ಮೇಲ್ನೋಟಕ್ಕೆ ಸತ್ಯವೆನುಸುತ್ತದೆ. ಮಳವಳ್ಳಿಯಲ್ಲಿ ಹೆಚ್ಚು ಕೆಲಸ ಮಾಡಿದ್ದೇನೆ. ಕಾರ್ಮಿಕ ಇಲಾಖೆಯಿಂದ ಆಹಾರ ಕಿಟ್ ಕೊಡುತ್ತೇವೆ ಎಂದು ಲಕ್ಷಾಂತರ ಕಿಟ್ ಲೆಕ್ಕ ಬರೆದಿದ್ದಾರೆ. ನಮ್ಮ ಕ್ಷೇತ್ರಕ್ಕೆ ಒಂದು ಕಿಟ್ ಬಂದಿಲ್ಲ. ಆರೋಗ್ಯ ಸಲಕರಣೆಗಳ ಕೋಟಿ ಲೆಕ್ಕ ಬರೆದಿದ್ದಾರೆ. ಖಂಡಿತವಾಗಿ ಹಗರಣವಾಗಿದೆ. ವಿರೋಧ ಪಕ್ಷದ ನಾಯಕರು ಸಹ ಹೇಳಿದ್ದಾರೆ. ಕೋವಿಡ್ ಸಂದರ್ಭದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ನನಗೆ ಅನಿಸುತ್ತಿದೆ ಎಂದು ಸಂಶಯ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಹಲವಾರು ಬಾರಿ ಹೇಳಿದ್ದೇನೆ. ಗಗನಚುಕ್ಕಿ ಜಲಪಾತೋತ್ಸವದಲ್ಲಿ ಪಾಲ್ಗೊಂಡ ಕಲಾವಿದರಿಗೆ ಹಣ ಬಿಡುಗಡೆಯಾಗಿಲ್ಲ. ಕಲಾವಿದರು ಹೆಚ್ಚು ಭಾಗವಯಿಸಿದ್ದರು. ತುಂಬಾ ಸಂಕಷ್ಟದಲ್ಲಿದ್ದಾರೆ. ತಕ್ಷಣವೇ ಜಿಲ್ಲಾಧಿಕಾರಿಗಳು ಕಲಾವಿದರಿಗೆ ಹಣ ಪಾವತಿಸಬೇಕು ಎಂದು ಒತ್ತಾಯಿಸಿದರು.