ಮಂಡ್ಯ : ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ದಶಪಥ ಕಾಮಗಾರಿ ನಡೆಸುತ್ತಿರುವ ದಿಲಿಪ್ ಬಿಲ್ಡ್ ಕಾನ್ ಲಿಮಿಟೆಡ್ ಅಕ್ರಮ ಕಲ್ಲು ಗಣಿಗಾರಿಕೆ ಮಾಡಿರುವ ಆರೋಪದ ಮೇಲೆ ಗಣಿ ಮತ್ತು ಭೂವಿಜ್ಞಾನ ಇಲಾಖೆ 63,95,8870 ರೂ. ದಂಡ ವಿಧಿಸಿದೆ.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಗೆ ಸ್ಥಳೀಯವಾಗಿ ಸಿಗುವ ಅಗತ್ಯ ಸಂಪನ್ಮೂಲ ಬಳಕೆಗೆ ಅವಕಾಶವಿದೆ. ಅದರಂತೆ ಕಾಮಗಾರಿಗೆ ಅಗತ್ಯವಿರುವ ಕಲ್ಲು ತೆಗೆಯಲು ಅನುಮತಿ ಕೋರಿ ಮಂಡ್ಯದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಚೇರಿಗೆ ದಿಲೀಪ್ ಬಿಲ್ಡ್ ಕಾನ್ ಲಿಮಿಟೆಡ್ ಕಂಪನಿಗೆ ಮನವಿ ಮಾಡಿತ್ತು.
ಗಣಿ ಇಲಾಖೆಯಿಂದ ಶ್ರೀರಂಗಪಟ್ಟಣ ತಾಲೂಕಿನ ಕಾಳೇನಹಳ್ಳಿ ಸರ್ವೆ ನಂ. 21ರ ಗೋಮಾಳದಲ್ಲಿ 7 ಎಕರೆ ಪ್ರದೇಶ ಗುರುತಿಸಲಾಗಿತ್ತು. ಆದ್ರೆ, ಸಂಪೂರ್ಣ ಅನುಮತಿ ನೀಡುವ ಮೊದಲೇ ದಿಲಿಪ್ ಬಿಲ್ಡ್ ಕಾನ್ ಕಂಪನಿ ಗಣಿಗಾರಿಕೆ ಆರಂಭಿಸಿತ್ತು.
ಈ ಬಗ್ಗೆ ಸ್ಥಳೀಯರು ದೂರು ನೀಡಿದ ಹಿನ್ನೆಲೆ ಫೆಬ್ರವರಿ 22ರಂದು ಸಂಸದೆ ಸುಮಲತಾ ಅಂಬರೀಶ್, ಗಣಿ ಇಲಾಖೆ ಸಚಿವ ಮುರುಗೇಶ್ ನಿರಾಣಿ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ರು. ಈ ವೇಳೆ ಅಕ್ರಮ ಗಣಿಗಾರಿಕೆ ನಡೆಸಿರುವುದು ಸಾಬೀತಾಗಿತ್ತು.
ಬಳಿಕ ಸಚಿವರ ಸೂಚನೆಯಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಟಿ ವಿ ಪುಷ್ಪ ನೇತೃತ್ವದಲ್ಲಿ ಸರ್ವೆ ನಡೆಸಿದ ಅಧಿಕಾರಿಗಳ ತಂಡಕ್ಕೆ ಕಳೆದೊಂದು ವರ್ಷದಿಂದ ಸ್ಫೋಟಕ ಬಳಸಿ 4,7,318 ಮೆಟ್ರಿಕ್ ಟನ್ ಕಲ್ಲು ತೆಗೆದಿರುವುದು ದೃಢಪಟ್ಟಿತ್ತು.
ಪ್ರತಿ ಟನ್‌ಗೆ 1570 ರೂ.ನಂತೆ 63,95,8870 ರೂ. ದಂಡ ವಿಧಿಸಿ, ನೋಟೀಸ್ ನೀಡಲಾಗಿದೆ. ಅಲ್ಲದೆ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನೂ ದಾಖಲಿಸಲಾಗಿದೆ. ಮೊದಲು ಸರ್ವೆ ಮಾಡಿದಾಗ 1.35 ಲಕ್ಷ ಮೆಟ್ರಿಕ್ ಟನ್ ಕಲ್ಲು ತೆಗೆಯಲಾಗಿದೆ ಎಂದು ಅಧಿಕಾರಿಗಳ ತಂಡ ವರದಿ ನೀಡಿತ್ತು.
ಇದಕ್ಕೆ ದಿಲೀಪ್ ಬಿಲ್ಡ್ ಕಾನ್ ಕಂಪನಿ ಆಕ್ಷೇಪಿಸಿದ ಹಿನ್ನೆಲೆ ಮೊತ್ತೊಮ್ಮೆ ಜಂಟಿ ಸಮೀಕ್ಷೆ ಮಾಡಲಾಗಿತ್ತು. ಈ ವೇಳೆ 4,7,318 ಮೆಟ್ರಿಕ್ ಟನ್ ಕಲ್ಲು ತೆಗೆದಿರುವುದು ದೃಢಪಟ್ಟಿದೆ. ಅದರಂತೆ ದಂಡವಿಧಿಸಲಾಗಿದೆ. ಅಲ್ಲದೆ ನ್ಯಾಯಾಲಯದಲ್ಲೂ ಧಾವೆ ಹೂಡಲಾಗಿದೆ.
ಬೇಲಿಯೇ ಎದ್ದು ಹೊಲ ಮೇಯ್ತು ಎಂಬಂತೆ ಸರ್ಕಾರದ ಕಾಮಗಾರಿ ನಿರ್ವಹಿಸುವ ಜವಾಬ್ದಾರಿ ಹೊತ್ತ ಪ್ರತಿಷ್ಠಿತ ದಿಲೀಪ್ ಬಿಲ್ಡ್ ಕಾನ್ ಕಂಪನಿ ಅಕ್ರಮ ಕಲ್ಲು ತೆಗೆದಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.