ಮಂಡ್ಯ: ಸರ್ಕಾರಿ ಜಮೀನು ಒತ್ತುವರಿ ಮಾಡಿ ನಿರ್ಮಿಸಿದ್ದ ಮಾಜಿ ಶಾಸಕರ ಸಹೋದರರ ಕಟ್ಟಡಗಳು ಸೇರಿದಂತೆ ಹಲವು ವಾಣಿಜ್ಯ ಕಟ್ಟಡಗಳ ತೆರವಿಗಾಗಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದೌಡಾಯಿಸಿದ್ದರು.
ಇಲ್ಲಿನ ಕೆ.ಆರ್.ಪೇಟೆ ತಾಲೂಕು ಆಡಳಿತ ಹಾಗೂ ಪುರಸಭೆ ಅಧಿಕಾರಿಗಳು ಜೆಸಿಬಿಯೊಂದಿಗೆ ಆಗಮಿಸಿ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಸಹೋದರರಿಗೆ ಸೇರಿದ ಅನಧಿಕೃತ ಕಟ್ಟಡಗಳ ತೆರವು ಮಾಡಲಾಯಿತು.
ಪುರಸಭಾ ವ್ಯಾಪ್ತಿಯಲ್ಲಿನ ಕೆಎಸ್‌ಆರ್‌ಸಿ ಹಾಗೂ ಖಾಸಗಿ ಬಸ್ ನಿಲ್ದಾಣದ ಸರ್ಕಾರಿ ಭೂಮಿ, ಕೆರೆ ಮೈದಾನದಲ್ಲಿ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿತ್ತು. ಈ ಕುರಿತು ದೂರುಗಳು ಬಂದಿದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿ ಕಟ್ಟಡಗಳ ತೆರವು ಮಾಡಿದ್ದಾರೆ.
ತೆರವು ಕಾರ್ಯಾಚರಣೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಪೊಲೀಸ್ ಅಧಿಕಾರಿಗಳು ಸೇರಿದಂತೆ 2 ಡಿಆರ್ ತುಕಡಿ ನಿಯೋಜನೆ ಮಾಡಲಾಗಿತ್ತು.