ಮಂಡ್ಯ: ತಮ್ಮ ಕ್ಷೇತ್ರಗಳ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿ ಮಾಡುತ್ತಿದ್ದಾರೆಂದು ಆರೋಪಿಸಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಮಂಡ್ಯದ ದಳಪತಿಗಳು ಸಿಡಿದೆದ್ದಿದ್ದಾರೆ.
ಈ ವಿಚಾರವಾಗಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಲು ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ, ಮಳವಳ್ಳಿ ಶಾಸಕ ಡಾ.ಕೆ. ಅನ್ನದಾನಿ ಹಾಗೂ ನಾಗಮಂಗಲ ಶಾಸಕ ಸುರೇಶ್ ಗೌಡ ಅವರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅಭಿವೃದ್ಧಿ ಕಾಮಗಾರಿ ಮಾಡುವಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಜನವರಿ 25 ರಿಂದ ಧರಣಿ ನಡೆಸಲು ನಿರ್ಧರಿಸಿದ್ದಾರೆ.
ಈ ಕುರಿತು ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರ ವಿಳಂಬ ನೀತಿಯಿಂದ ನಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿವೆ. ಅರಕೆರೆ ರಸ್ತೆ ನಿರ್ಮಾಣ ಕಾಮಗಾರಿ ಆರಂಭಿಸುವಂತೆ ಕಳೆದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಒತ್ತಾಯ ಮಾಡಿದ್ದೆ. 7 ದಿನಗಳಲ್ಲಿ ಕಾಮಗಾರಿ ಆರಂಭಿಸುವುದಾಗಿ ಭರವಸೆ ನೀಡಿದ್ದರು. ಆದರೆ 10 ದಿನ ಕಳೆದರೂ ಕಾಮಗಾರಿ ಆರಂಭವಾಗಿಲ್ಲ. ಹೀಗಾಗಿ ಹೋರಾಟ ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ, 10 ಕೋಟಿ ರೂ. ಬಿಡುಗಡೆಯಾಗಿದೆ. ನಾವು ಹೊಸದಾಗಿ ಅನುದಾನ ಕೇಳುತ್ತಿಲ್ಲ. ಈಗಾಗಲೇ ಬಿಡುಗಡೆಯಾಗಿರುವ ಅನುದಾನದ ಕಾಮಗಾರಿ ಆರಂಭಿಸುವಂತೆ ಒತ್ತಾಯ ಮಾಡುತ್ತಿದ್ದೇವೆ. ಆದರೆ ಜಿಲ್ಲಾಧಿಕಾರಿಗಳು ಕಾಮಗಾರಿ ಆರಂಭಿಸಲು ಆಸಕ್ತಿ ತೋರಿಸುತ್ತಿಲ್ಲ. ಜಾಗ ಅಳೆಯುತ್ತಾ, ಕೆಳ ಹಂತದ ಅಧಿಕಾರಿಗಳಿಂದ ವರದಿ ಪಡೆಯುವುದರಲ್ಲೇ ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನಾವು ಜನರಿಗೆ ಉತ್ತರ ನೀಡಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಹಾಗೂ ಜಿಲ್ಲಾಡಳಿತದ ವಿಳಂಬ ಧೋರಣೆಯಿಂದಾಗಿ ಜನರಿಗೆ ಅನ್ಯಾಯವಾಗುತ್ತಿದೆ. ಅಧಿಕಾರಿಗಳ ವರ್ತನೆಯಿಂದ ಜನರಲ್ಲಿ ಗೊಂದಲ ಮೂಡಿದೆ. ಸರ್ಕಾರದ ನೀತಿಗೆ ನಮ್ಮ ಧಿಕ್ಕಾರವಿದೆ. ಕುಮಾರಸ್ವಾಮಿ ಅವರ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳನ್ನು ಪ್ರತಿಭಟನೆಯ ಮೂಲಕವೇ ಪಡೆಯುತ್ತೇವೆ ಎಂದರು.
ಶಾಸಕ ಡಾ.ಕೆ. ಅನ್ನದಾನಿ ಮಾತನಾಡಿ, ನಮ್ಮ ಕ್ಷೇತ್ರದಲ್ಲೂ ಮಂಜೂರಾದ ಕಾಮಗಾರಿಗಳನ್ನು ತಡೆ ಹಿಡಿಯಲಾಗಿದೆ. ಮುತ್ತತ್ತಿ, ಬೆಳಕವಾಡಿ, ಹಲಗೂರು ರಸ್ತೆಯಲ್ಲಿ ಸಂಚಾರ ಮಾಡಲು ಸಾಧ್ಯವಾಗುತ್ತಿಲ್ಲ. ಜನರು ಜನಪ್ರತಿನಿಧಿಗಳ ವಿರುದ್ಧ ಶಾಪ ಹಾಕುತ್ತಿದ್ದಾರೆ. ಆದರೆ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ವಿಳಂಬ ಮಾಡುತ್ತಿದ್ದಾರೆ. ನಾನೂ ಕೂಡ ಧರಣಿಯಲ್ಲಿ ಪಾಲ್ಗೊಳ್ಳುತ್ತೇನೆ ಎಂದರು.