ಮಂಡ್ಯ: ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಠಕ್ಕೆ ಭಾನುವಾರ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಡಿಸಿಎಂ ಆದ ಬಳಿಕ ಮೊದಲ ಬಾರಿಗೆ ಭೇಟಿ ನೀಡಿದ ಡಿ ಕೆ ಶಿವಕುಮಾರ್ ಅವರಿಗೆ ಪೂರ್ಣಕುಂಭ ಸಹಿತ ಅದ್ಧೂರಿ ಮೆರವಣಿಗೆ ಮೂಲಕ ಮಠದ ಆಡಳಿತ ಮಂಡಳಿಯಿಂದ ಭವ್ಯ ಸ್ವಾಗತ ಕೋರಿದರು. ಬಳಿಕ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ವಿಶೇಷ ಪೂಜೆ ನಡೆಯಿತು. ಈ ವೇಳೆ ಕಾಲ ಭೈರವನ ದರ್ಶನ ಪಡೆದು ಡಿ ಕೆ ಶಿವಕುಮಾರ್ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ನಿರ್ಮಲಾನಂದನಾಥ ಸ್ವಾಮೀಜಿ ಅವರ ಜೊತೆ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದರು. ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ ಹಾಗೂ ನೂತನ ಉಪಮುಖ್ಯಮಂತ್ರಿಗೆ ಕೆಲವೊಂದಿಷ್ಟು ಸಲಹೆ ಸೂಚನೆ ನೀಡಿದರು. ಸಿಎಂ ಪಟ್ಟ ಕೈತಪ್ಪಿದ ಬಗ್ಗೆಯೂ ಡಿ ಕೆ ಶಿ ಬಳಿ ಸ್ವಾಮೀಜಿ ಮಾಹಿತಿ ಪಡೆದರು ಎಂದು ತಿಳಿದುಬಂದಿದೆ.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ನಾನು ಭಕ್ತ, ಭಗವಂತನಿಗೆ ಕೈ ಮುಗಿಯಲು ಬಂದಿದ್ದೇನೆ. ನಾನು ಈ ಹಿಂದೆ ಹೇಳಿದ್ದೇನೆ. ಧರ್ಮ ಯಾವುದಾದರೂ ತತ್ವ ಒಂದೇ. ನಾಮ ನೂರಾದರೂ ದೈವ ಒಂದೇ. ಪೂಜೆ ಯಾವುದಾದರೂ ಭಕ್ತಿ ಒಂದೆ. ಕರ್ಮ ಯಾವುದಾದರೂ ನಿಷ್ಠೆ ಒಂದೆ. ದೇವನೊಬ್ಬ ನಾಮ ಹಲವು. ಎಲ್ಲ ಸಮಾಜದವರಿಗೆ ಅವರದ್ದೇ ಅದ ನಂಬಿಕೆ ಇರುತ್ತೆ. ಮನೆಯನ್ನ ಹೇಗೆ ಹುಷಾರಾಗಿ ಇಟ್ಟಿಕೊಳ್ತಿವೋ. ಹಾಗೇ ಮಠವನ್ನ ಹುಷಾರಾಗಿ ಇಟ್ಕೊಳ್ತೇವೆ. ಟೈಮ್ ಬಂದಾಗ ಮಂಡ್ಯ ಜನಕ್ಕೆ ಹೇಳ್ತೇನೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಮಳೆ ಅವಾಂತರ ವಿಚಾರವಾಗಿ ಮಾತನಾಡಿದ ಅವರು, ಪ್ರಕೃತಿ ಯಾರ ಕೈನಲ್ಲೂ ಇಲ್ಲ, ನಾವು ಎಚ್ಚರಿಕೆಯಿಂದ ಇರಬೇಕು. ಏನೇನೂ ಹಾನಿಯಾಗಿದೆ, ಸರಿ ಮಾಡಬೇಕು. ಸರಿ ಮಾಡುವ ಕಾಲ ಬಂದಿದೆ. ಅದನ್ನು ಮುಂದಿನ ದಿನಗಳಲ್ಲಿ ಮಾಡ್ತೇವೆ. ನಾನು ಇಲ್ಲಿದ್ದೇನೆ. ಏನು ಹೇಳಕ್ಕಾಗಲ್ಲ. ಎಲ್ಲದಕ್ಕೂ ಹಣದ ನೆರವು ಒಂದೇ ಪರಿಹಾರವಲ್ಲ. ಬರಿ 5 ಲಕ್ಷ ಕೊಟ್ಟರೆ ಪರಿಹಾರ ಅಲ್ಲ. ಮುಂದೆ ಇಂತಹ ಸಂದರ್ಭಗಳು ಬರಬಾರದು ಎಂದು ಮುಂಜಾಗ್ರತಾ ಕ್ರಮ ಕೈಗೊಳ್ತೇವೆ ಎಂದು ಭರವಸೆ ನೀಡಿದರು.
ಅಜ್ಜಯ್ಯನ ದರ್ಶನ ಪಡೆದ ಡಿಸಿಎಂ ಡಿ ಕೆ ಶಿವಕುಮಾರ್.. ಇದಕ್ಕೂ ಮುನ್ನ ತಿಪಟೂರು ತಾಲೂಕಿನ ನೊಣವಿನಕೆರೆಯಲ್ಲಿರುವ ಶ್ರೀ ಕಾಡಸಿದ್ದೇಶ್ವರ ಮಠಕ್ಕೆ ಡಿಕೆಶಿ ಭೇಟಿ ನೀಡಿ ಅಜ್ಜಯ್ಯನ ದರ್ಶನ ಪಡೆದರು. ನಿನ್ನೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಡಿ ಕೆ ಶಿವಕುಮಾರ್ ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರು. ಡಿಸಿಎಂ ಆದ ಬಳಿಕ ಇಂದು ಮೊದಲ ಬಾರಿಗೆ ಶ್ರೀ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿದ್ದರು.
ಶ್ರೀ ಕರಿವೃಷಭ ದೇಶಿಕೇಂದ್ರ ಸ್ವಾಮೀಜಿಗಳ ನೇತೃತ್ವದಲ್ಲಿ ಡಿ ಕೆ ಶಿವಕುಮಾರ್ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದರು. ಚುನಾವಣೆಗೂ ಮೊದಲು ಹಾಗೂ ನಂತರ ನಾಲ್ಕೈದು ಬಾರಿ ಮಠಕ್ಕೆ ಭೇಟಿ ನೀಡಿ ಅಜ್ಜಯ್ಯನ ದರ್ಶನ ಪಡೆದು ಪೂಜೆ ಸಲ್ಲಿಸಿದ್ದರು. ಸದ್ಯ ಖಾತೆ ಹಂಚಿಕೆಗೂ ಮೊದಲು ಕಾಡಸಿದ್ದೇಶ್ವರ ಮಠಕ್ಕೆ ಆಗಮಿಸಿದ ಡಿ. ಕೆ. ಶಿವಕುಮಾರ್ ಪ್ರಬಲ ಖಾತೆಗಳ ಮೇಲೆ ಕಣ್ಣಿಟ್ಟಿದ್ದು, ಭಾನುವಾರ ಅಜ್ಜಯ್ಯನ ಆಶೀರ್ವಾದ ಪಡೆದರು.
ಇದನ್ನೂಓದಿ:ಸಿದ್ದರಾಮಯ್ಯ-ಡಿಕೆಶಿ ಪದಗ್ರಹಣ: ಕಂಠೀರವ ಸ್ಟೇಡಿಯಂನಲ್ಲಿ ಕೈ ಶಕ್ತಿ ಪ್ರದರ್ಶನ