ಮಂಡ್ಯ: ಅಭಿವೃದ್ಧಿ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮ ಐಸಿಎಂಆರ್ ನಿಯಮಾವಳಿಗಳು ಕಠಿಣವಾಗಿವೆ. ಕೊರೊನಾ ಔಷಧ ವಿಚಾರವಾಗಿ ಅದು ತೆಗೆದುಕೊಂಡಿರುವ ತೀರ್ಮಾನ ಸರಿಯಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ್ ನಾರಾಯಣ ಸಮರ್ಥಿಸಿಕೊಂಡರು.
ನಗರಕ್ಕೆ ಭೇಟಿ ನೀಡಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನರು ಆತಂಕ ಪಡುವ ಅಗತ್ಯವಿಲ್ಲ. ಕೊರೊನಾ ಔಷಧ ವಿಚಾರವಾಗಿ ಐಸಿಎಂಆರ್ ತೆಗೆದುಕೊಂಡ ತೀರ್ಮಾನ ಸರಿಯಾಗಿದೆ ಎಂದರು. ವಿಪಕ್ಷ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯ ಸರ್ಕಾರ ಕೋವಿಡ್ ನಿರ್ವಹಣೆ ಮಾಡುತ್ತಿರುವುದನ್ನು ಅವರಿಗೆ ಸಹಿಸಲು ಆಗುತ್ತಿಲ್ಲ. ನಮ್ಮ ಸರ್ಕಾರದ ಕೆಲಸ ನೋಡಿ ಈ ರೀತಿ ಆರೋಪ ಮಾಡ್ತಿದ್ದಾರೆ. ಚುನಾವಣೆ ಇನ್ನೂ ದೂರ ಇದೆ. ಅವರಿಗೆ ಲೆಕ್ಕ ಕೇಳಲು ಟೈಂ ಇದೆ.
ಇದು ಜನರ ದುಡ್ಡು, ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಲೆಕ್ಕ ಕೇಳಲು ಸದನ ಇದೆ. ಜನ ಈಗಾಗಲೇ ಸಾಕಷ್ಟು ನೊಂದಿದ್ದು, ಇಂತಹ ಸಮಯದಲ್ಲಿ ಗೊಂದಲ ಉಂಟು ಮಾಡದೆ ಜನಪರ ಕೆಲಸ ಮಾಡುವಂತೆ ಸಲಹೆ ನೀಡಿದರು. ಒಂದೆರಡು ದಿನ ತೊಂದರೆಯಾಗಿದ್ದು ನಿಜ. ಒಂದೇ ಬಾರಿಗೆ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದರಿಂದ ಸಮಸ್ಯೆಯಾಗಿತ್ತು. ಆದರೆ, ಈಗ ಸಮಸ್ಯೆ ಇಲ್ಲ. ಸುಮಾರು 15 ಸಾವಿರದಷ್ಟು ಬೆಡ್, ಆ್ಯಂಬುಲೆನ್ಸ್, ಪರೀಕ್ಷೆ ನಡೆಸಲು ವ್ಯವಸ್ಥೆ ಮಾಡಲಾಗಿದೆ. ಈಗ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದರು.
ನಮ್ಮ ರಾಜ್ಯದದಲ್ಲಿ ಸೋಂಕು ಸಮುದಾಯ ಮಟ್ಟದಲ್ಲಿ ಹರಡುತ್ತಿಲ್ಲ. ಬೇರೆ ರಾಜ್ಯಕ್ಕೆ ಹೊಲಿಸಿದ್ರೆ ನಮ್ಮಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದ್ರೆ ನಮ್ಮ ರಾಜ್ಯದಲ್ಲಿ 20 ಸಾವಿರ ಸೋಂಕಿತ ಪ್ರಕರಣಗಳಿವೆ ಎಂದರು.
ಲಾಕ್‌ಡೌನ್ ಪರಿಹಾರವೂ ಅಲ್ಲ : ಈಗಾಗಲೇ ಸಾಕಷ್ಟು ದಿನಗಳ ಕಾಲ ಲಾಕ್‌ಡೌನ್ ಮಾಡಲಾಗಿದೆ. ಮತ್ತೆ ಲಾಕ್‌ಡೌನ್ ಮಾಡುವ ಮೂಲಕ ಮತ್ತಷ್ಟು ದಿನಗಳನ್ನ ಮುಂದೆ ದೂಡಬಹುದು. ಆದರೆ, ಅದು ಸೂಕ್ತವಲ್ಲ. ಈಗಷ್ಟೇ ಜನ ಜೀವನವನ್ನು ಕಟ್ಟಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಮತ್ತೆ ಗೊಂದಲ, ಸಮಸ್ಯೆ ಉಂಟು ಮಾಡುವುದು ಬೇಡ. ಕೊರೊನಾ ಜೊತೆ ಜೊತೆಯಲ್ಲೇ ನಿರ್ವಹಣೆ ಮಾಡಬೇಕಿದೆ ಎಂದರು.