ಮಂಡ್ಯ: ಜಿಲ್ಲೆಯಲ್ಲಿ ಜನರು ಬೆಚ್ಚಿ ಬೀಳುವಂತಹ ಭಯಾನಕ ಕೊಲೆ ಪ್ರಕರಣ ಇಂದು ನಡೆದಿದೆ. ರೌಡಿಶೀಟರ್ ಒಬ್ಬನನ್ನು ಸ್ನೇಹಿತರೇ ಕತ್ತು ಕತ್ತರಿಸಿ ಕೊಲೆ ಮಾಡಿರುವಂತಹ ಭೀಕರ ಘಟನೆ ಶ್ರೀರಂಗಪಟ್ಟಣದ ಬಳಿ ನಡೆದಿದೆ.
ಸ್ನೇಹಿತರು ಪಾರ್ಟಿ ಮಾಡುವ ವೇಳೆ ಗಲಾಟೆ: ಶ್ರೀರಂಗಪಟ್ಟಣ ತಾಲೂಕಿನ ಹುಲಿಕೆರೆಯ ಕೆಆರ್ಎಸ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ರೌಡಿ ಶೀಟರ್ ಆಗಿದ್ದಂತಹ ಸುಧೀರ್ (35) ಎಂಬಾತನನ್ನು ಭಯಾನಕವಾಗಿ ಹತ್ಯೆ ಮಾಡಲಾಗಿದೆ. ರೌಡಿಶೀಟರ್ ಸುಧೀರ್ ಹಾಗೂ ಸ್ನೇಹಿತರೊಂದಿಗೆ ಇಂದು ಎಣ್ಣೆ ಪಾರ್ಟಿ ಮಾಡಿದ್ದಾರೆ. ಸ್ನೇಹಿತರೊಂದಿಗೆ ಸೇರಿಕೊಂಡು ಪಾರ್ಟಿ ಮಾಡುವಾಗಲೇ ಗಲಾಟೆ ಶುರುವಾಗಿದೆ ಎನ್ನಲಾಗಿದೆ.
ಪಾರ್ಟಿಯ ಮಧ್ಯೆ ಆರಂಭವಾದ ಜಗಳ ತಾರಕಕ್ಕೇರಿದೆ. ಇದರಿಂದಾಗಿ ಪಾರ್ಟಿಯಿಂದ ಅರ್ಧಕ್ಕೆ ಹುಲಿಕೆರೆಯ ರಸ್ತೆ ಬಳಿಗೆ ರೌಡಿಶೀಟರ್ ಸುಧೀರ್ ಎದ್ದು ಬಂದಿದ್ದಾನೆ. ಆದರೆ, ಆತನನ್ನು ಹಿಂಬಾಲಿಸಿಕೊಂಡು ಬಂದಂತಹ ಸ್ನೇಹಿತರು ಕುತ್ತಿಗೆ ಕತ್ತರಿಸಿ ಕೊಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಕೆಆರ್ಎಸ್ ಪೊಲೀಸ್ ಠಾಣೆಗೆ ಮಾಹಿತಿ: ಸುಧೀರ್ ತಲೆ ಕತ್ತರಿಸಿದ ಬಳಿಕ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಹುಲಿಕೆರೆಯ ರಸ್ತೆಯ ಬಳಿಯಲ್ಲಿ ಭಯಾನಕ ಮರ್ಡರ್ ಕಂಡು ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಈ ಬಗ್ಗೆ ಕೆಆರ್ಎಸ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಕೊಲೆಯಾದ ರೌಡಿಶೀಟರ್ ಸುಧೀರ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ರೌಡಿಶೀಟರ್ ಸುಧೀರ್ನನ್ನು ಸ್ನೇಹಿತರೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಕ್ಕೆ ಕಾರಣ ಹಳೆ ದ್ವೇಷ ಎನ್ನಲಾಗುತ್ತಿದೆ. ಈ ಬಗ್ಗೆ ಪೊಲೀಸರ ತನಿಖೆಯಿಂದ ಖಚಿತ ಮಾಹಿತಿ ತಿಳಿದು ಬರಬೇಕಿದೆ.
ಮಾರಕಾಸ್ತ್ರಗಳಿಂದ ಕೊಚ್ಚಿ ಅಪರಿಚಿತ ವ್ಯಕ್ತಿಯ ಬರ್ಬರ ಕೊಲೆ: ಇನ್ನೊಂದೆಡೆ ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗೊಟ್ಟಿಗೆರೆ ಪಾಳ್ಯದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬನ ಶವ ಕಂಡು ಬಂದಿದೆ. ನೈಸ್ ರಸ್ತೆಯ ಫ್ಲೈಓವರ್ ಕೆಳಭಾಗದಲ್ಲಿ ಸರಿಸುಮಾರು 30 ವರ್ಷ ವಯಸ್ಸಿನ ವ್ಯಕ್ತಿಯ ಶವ ಪತ್ತೆಯಾಗಿದ್ದು, ತಡರಾತ್ರಿ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ.
ಬೆಂಗಳೂರಿನಲ್ಲಿ ಬರ್ಬರ ಕೊಲೆ : ಮಾರಕಾಸ್ತ್ರಗಳಿಂದ ತಲೆ ಹಾಗೂ ಮುಖಕ್ಕೆ ಹಲ್ಲೆ ಮಾಡಿ ಕೊಲೆ ಮಾಡಿರುವ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ. ಮೃತನ ಕುರಿತು ಇಲ್ಲಿಯವರೆಗೆ ಯಾವುದೇ ವಿವರ ತಿಳಿದುಬಂದಿಲ್ಲ. ಬೆಳಗ್ಗೆ 7 ಗಂಟೆ ಸುಮಾರಿಗೆ ಪೊಲೀಸ್ ಸಹಾಯವಾಣಿಗೆ ಬಂದ ಕರೆಯ ಮಾಹಿತಿ ಆಧರಿಸಿ ಘಟನಾ ಸ್ಥಳಕ್ಕೆ ತಲಘಟ್ಟಪುರ ಠಾಣೆಯ ಪೊಲೀಸರು ಭೇಟಿ ನೀಡಿದ್ದಾರೆ.
ಮೃತನ ಕುರಿತು ಮಾಹಿತಿಯನ್ನು ಕಲೆಹಾಕಲಾಗುತ್ತಿದೆ: ಈಗಾಗಲೇ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ತಡರಾತ್ರಿ ಹತ್ಯೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ. ವರದಿ ಬಂದ ಬಳಿಕ ಹತ್ಯೆಯ ಸಮಯ ತಿಳಿಯಲಿದೆ. ಮೃತನ ಕುರಿತು ಮಾಹಿತಿಯನ್ನು ಕಲೆಹಾಕಲಾಗುತ್ತಿದೆ ಎಂದು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಪಿ ಕೃಷ್ಣಕಾಂತ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮಾರಕಾಸ್ತ್ರಗಳಿಂದ ಕೊಚ್ಚಿ ಅಪರಿಚಿತ ವ್ಯಕ್ತಿಯ ಬರ್ಬರ ಕೊಲೆ.. ಆ ಮರ್ಡರ್ ಬಗ್ಗೆ ಡಿಸಿಪಿ ಹೇಳಿದ್ದು ಹೀಗೆ!