ಮಂಡ್ಯ: ಜಿಲ್ಲೆಯಲ್ಲಿ ದಾರುಣ ಘಟನೆಯೊಂದು ನಡೆದಿದೆ. ಪತ್ನಿಯನ್ನ ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನ ಹುಲಿಕೆರೆ ಗ್ರಾಮದಲ್ಲಿ ನಡೆದಿದೆ. ಸೌಮ್ಯ (28) ಮೃತ ಗೃಹಿಣಿ ಎಂದು ಗುರುತಿಸಲಾಗಿದೆ. ಗಣೇಶ್ (33) ಎಂಬಾತ ಪತ್ನಿಯನ್ನು ಕೊಂದು ಪರಾರಿ ಆಗಿರುವ ಆರೋಪಿ. ಕಳೆದ 8 ವರ್ಷಗಳ ಹಿಂದೆ ನಂಜನಗೂಡು ತಾಲೂಕಿನ ಕೊಂಗಳ್ಳಿ ಗ್ರಾಮದ ಸೌಮ್ಯ ಜೊತೆ ಗಣೇಶ್ ಮದುವೆ ಆಗಿತ್ತು. ಈ ದಂಪತಿಗೆ ಏಳು ವರ್ಷದ ಗಂಡು ಮಗ ಇದ್ದಾನೆ. ಸದ್ಯ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಪತ್ನಿ ಕತ್ತು ಕೂಯ್ದು ಗಣೇಶ್ ಪರಾರಿ ಆಗಿದ್ದು, ನೆರೆಹೊರೆಯವರು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಮಂಡ್ಯ ಎಸ್‌ಪಿ ಯತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಪರಾರಿ ಆಗಿರುವ ಗಣೇಶ್‌ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಇತ್ತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಎಸ್‌ಪಿ ಹೇಳಿದ್ದು ಹೀಗೆ: ಈ ಕೊಲೆ ಬಗ್ಗೆ ಪ್ರತಿಕ್ರಿಯೆ ನೀಡಿದ ಎಸ್‌ಪಿ ಯತೀಶ್ ಅವರು, ಹುಲಿಕೆರೆ ಗ್ರಾಮದಲ್ಲಿ ಸುಮಾರು 26 ವರ್ಷದ ಮಹಿಳೆಯ ಕೊಲೆ ಆಗಿರುವುದರ ಬಗ್ಗೆ ಮಾಹಿತಿ ಬಂದಿದೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಲಾಗಿದೆ. ಕೊಲೆಗೂ ಮುನ್ನ ಗಂಡ-ಹೆಂಡತಿ ಮಧ್ಯೆ ಜಗಳ ನಡೆದಿದ್ದು, ನಂತರ ಆರೋಪಿ ಪತಿ ಕೊಲೆ ಮಾಡಿರಬಹುದೆಂದು ಶಂಕಿಸಲಾಗಿದೆ. ಅಷ್ಟೇ ಅಲ್ಲ ಈ ಕೊಲೆ ಸಂಬಂಧ ಗಂಡನ ಕುಟುಂಬಸ್ಥರು ಸಹ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆ ನಾವು ದೂರನ್ನು ದಾಖಲಿಸಿಕೊಂಡು ತನಿಖೆ ಪ್ರಾರಂಭಿಸುತ್ತೇವೆ ಎಂದು ಹೇಳಿದರು.
9 ವರ್ಷಗಳ ಹಿಂದೆ ಗಣೇಶ್ನನ್ನು ಮದುವೆಯಾಗಿದ್ದಾರೆ. ಆರೋಪಿ ಗಣೇಶ ಸ್ವಗ್ರಾಮದಲ್ಲಿ ಲಾರಿ ಡ್ರೈವರ್ ಆಗಿ ಕೆಸಲ ಮಾಡುತ್ತಿದ್ದ. 2021ರಲ್ಲಿ ಮಹಿಳೆ ತನ್ನ ಪತಿ ವಿರುದ್ಧ ದೂರು ದಾಖಲಿಸಿದ್ದರು. ಆ ಪ್ರಕರಣದಲ್ಲಿ ಗಂಡನನ್ನು ಬಂಧಿಸಿ ಬಿಡುಗಡೆ ಮಾಡಲಾಗಿತ್ತು. ಈಗ ಆಕೆಯ ಗಂಡ ನಾಪತ್ತೆ ಆಗಿದ್ದಾನೆ. ಆತನಿಗಾಗಿ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಸದ್ಯ ಸೌಮ್ಯಳ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು. ಈ ಘಟನೆ ಕುರಿತು ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗೆ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.