ಮಂಡ್ಯ: ಪಾಂಡವಪುರ ತಾಲೂಕು ಕಚೇರಿಯ ಗ್ರಾಮ ಲೆಕ್ಕಿಗ (ವಿ.ಎ) ನೌಕರರೊಬ್ಬರನ್ನು ವರ್ಗಾವಣೆ ಮಾಡಲು ಪಾಂಡವಪುರ ತಹಶೀಲ್ದಾರ್ ಕೆ.ಸಿ. ಸೌಮ್ಯ 40 ಸಾವಿರ ರೂ ಲಂಚ ಸ್ವೀಕರಿಸುತ್ತಿದ್ದಾಗ ಮಂಡ್ಯ ಲೋಕಾಯುಕ್ತ ಡಿವೈಎಸ್ಪಿ ಸುನೀಲ್ ನೇತೃತ್ವದ ತಂಡದ ಬಲೆಗೆ ಬಿದ್ದಿದ್ದಾರೆ. ಬನ್ನಂಗಾಡಿ ಹೋಬಳಿ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗ್ರಾಮ ಲೆಕ್ಕಿಗ ಮರಿಸ್ವಾಮಿ ಗೌಡ ಎಂಬವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.
ಮರಿಸ್ವಾಮಿ ಗೌಡ ಅವರು ತಾಲೂಕಿನ ಬೇರೆಡೆಗೆ ವರ್ಗಾವಣೆ ಮಾಡಬೇಕೆಂದು ತಹಶೀಲ್ದಾರ್ ಬಳಿ ಮನವಿ ಮಾಡಿಕೊಂಡಿದ್ದರು. ವರ್ಗಾವಣೆಗೆ 40 ಸಾವಿರ ರೂಪಾಯಿ ಹಣ ಕೊಡಬೇಕು ಎಂದು ತಹಶೀಲ್ದಾರ್ ಹಣದ ಬೇಡಿಕೆ ಇಟ್ಟಿದ್ದಾರೆ. ಹಣ ಕೇಳಿದ್ದ ಹಿನ್ನೆಲೆಯಲ್ಲಿ ಮರಿಸ್ವಾಮೀಗೌಡ ಜು. 21ರಂದು ಮಂಡ್ಯ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು.
ಮರಿಸ್ವಾಮಿ ಗೌಡ ದೂರಿನ ಮೇರೆಗೆ ಮಂಡ್ಯ ಲೋಕಾಯುಕ್ತ ಡಿವೈಎಸ್ಪಿ ಸುನಿಲ್ ಕುಮಾರ್ ನೇತೃತ್ವದ ಇನ್ಸ್ಪೆಕ್ಟರ್ ತಂಡ ಪಾಂಡವಪುರ ತಾಲೂಕು ಕಚೇರಿಗೆ ಸಂಜೆ 6 ಗಂಟೆ ಸಮಯದಲ್ಲಿ ದಾಳಿ ನಡೆಸಿದ್ದು, ಸ್ಥಳದಲ್ಲೇ ಮರಿಸ್ವಾಮಿ ಗೌಡ ಅವರಿಂದ ತಹಶೀಲ್ದಾರ್ ಕೆ.ಸಿ. ಸೌಮ್ಯ ಲಂಚ ಸ್ವೀಕರಿಸುತ್ತಿರು. ಅದೇ ವೇಳೆ ಹಣಸಮೇತ ತಹಶೀಲ್ದಾರ್ ಅವರನ್ನು ಹಿಡಿದು ಲೋಕಾಯುಕ್ತ ಪೊಲೀಸರು ಕೇಸು ದಾಖಲಿಸಿದ್ದಾರೆ.
ಲೋಕಾಯುಕ್ತರನ್ನು ಕಂಡು ಬೆಚ್ಚಿದ ತಹಶೀಲ್ದಾರ್ ಕೆಲಕಾಲ ಮೌನವಾಗಿ ಬಿಟ್ಟರು. ನಂತರ ಕಾನೂನು ಪ್ರಕಾರ ಕ್ರಮ ಜರುಗಿಸಿದ್ದಾರೆ. ಲೋಕಾಯುಕ್ತ ಇನ್ಸ್ಪೆಕ್ಟರ್ಗಳಾದ ಬ್ಯಾಟರಾಯಿ ಗೌಡ, ಮೋಹನ್ ರೆಡ್ಡಿ, ಪ್ರಕಾಶ್ ಹಾಗೂ ಸಿಬ್ಬಂದಿ ದಾಳಿಯಲ್ಲಿ ಇದ್ದರು.
ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ: ಜಮೀನು ಖಾತೆ ಬದಲಾವಣೆ ವಿಚಾರವಾಗಿ ಒಬ್ಬರಿಂದ ಲಂಚ ಪಡೆಯುತ್ತಿದ್ದ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೌಕ್ರಾಡಿ ಗ್ರಾಮ ಪಂಚಾಯಿತಿ ಅಧಿಕಾರಿ ಮಹೇಶ್ ಜಿ ಎನ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕೊಕ್ಕಡ ನಿವಾಸಿಯೊಬ್ಬರು ತಮ್ಮ ಜಮೀನಿನ ಖಾತೆ ಬದಲಾವಣೆ ಮಾಡಿಕೊಡಲು 2017ರಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಆಗಿರಲಿಲ್ಲ. 2021 ರಲ್ಲಿ ಮತ್ತೆ ಅರ್ಜಿ ಸಲ್ಲಿಸಿ ಶುಲ್ಕವನ್ನೂ ಕಟ್ಟಿದ್ದರು. ಆದರೆ ಖಾತೆ ಬದಲಾವಣೆ ಆಗಿರಲಿಲ್ಲ. ಈ ಬಗ್ಗೆ ಪಿಡಿಒ ಮಹೇಶ್ ಬಳಿ ವಿಚಾರಿಸಿದಾಗ ಪಿಡಿಒ ಜಮೀನಿನ ಖಾತೆ ಬದಲಾವಣೆ ಮಾಡಿಕೊಡಲು 20 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ಸ್ವೀಕರಿಸುತ್ತಿದ್ದ ವೇಳೆ ದಾಳಿ ಮಾಡಿದ ಲೋಕಾಯುಕ್ತ ಪೊಲೀಸ್ ಲಂಚದ ಹಣ ಸಮೇತ ಪಿಡಿಒ ಮಹೇಶ್ ಅವರನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಲಂಚ ಸ್ವೀಕರಿಸುತ್ತಿದ್ದ ಶಿವಾಜಿನಗರ ಠಾಣಾ ಮಹಿಳಾ ಪಿಎಸ್ಐ ಲೋಕಾಯುಕ್ತ ಬಲೆಗೆ