ಮಂಡ್ಯ: ಕೌಟುಂಬಿಕ ಕಲಹದಿಂದ ಮನನೊಂದು ದಂಪತಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಕೆ.ಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಪುರುಷೋತ್ತಮ್ (46) ಹಾಗೂ ವಿದ್ಯಾ(32) ಮೃತ ದಂಪತಿ. ಗುರುವಾರ ಘಟನೆ ವರದಿಯಾಗಿದೆ.
ಘಟನೆಯ ವಿವರ: ಕುಟುಂಬ ಕಲಹದಿಂದ ಬೇಸತ್ತು ಪತಿ ಕೆಲಸಕ್ಕೆ ತೆರಳಿದ್ದಾಗ ಪತ್ನಿ ವಿದ್ಯಾ ಗುರುವಾರ ಸಂಜೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷಯ ತಿಳಿದು ಮನೆಗೆ ಬಂದ ಪತಿ ಪುರುಷೋತ್ತಮ್ ಮನೆ ಪಕ್ಕದ ಜಮೀನಿಗೆ ತೆರಳಿ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಪುರುಷೋತ್ತಮ್ ಮೈಸೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಮೃತರಿಗೆ ಇಬ್ಬರು ಪುಟ್ಟ ಮಕ್ಕಳಿದ್ದು 2 ಹಾಗೂ 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಶವಗಳನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೇರಳದ ದಂಪತಿ ಆತ್ಮಹತ್ಯೆ: ಇತ್ತೀಚೆಗೆ ಮಂಗಳೂರು ನಗರದ ಲಾಡ್ಜ್ನಲ್ಲಿ ಕೇರಳದ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಕಣ್ಣೂರು ಜಿಲ್ಲೆಯ ರವೀಂದ್ರನ್ (55) ಮತ್ತು ಸುಧಾ (50) ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದರು. ತಳಿಪರಂಬದ ನಿವಾಸಿಗಳಾದ ಇವರು ಫೆಬ್ರವರಿ 6ರಂದು ಮಂಗಳೂರಿಗೆ ಬಂದಿದ್ದರು. ನಗರದ ಫಳ್ನೀರ್ನ ಹೋಟೆಲ್ ನ್ಯೂ ಬ್ಲೂ ಸ್ಟಾರ್ ಲಾಡ್ಜ್ನಲ್ಲಿ ಆಧಾರ್ ಕಾರ್ಡ್ ದಾಖಲೆ ನೀಡಿ ರೂಂ ಪಡೆದಿದ್ದರು ಎಂದು ಗೊತ್ತಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳದಲ್ಲಿ ಡೆತ್‌ನೋಟ್ ಲಭ್ಯವಾಗಿಲ್ಲ. ಸ್ಥಳಕ್ಕೆ ನಗರ ಪೊಲೀಸ್ ಕಮೀಷನರ್ ಶಶಿಕುಮಾರ್, ಡಿಸಿಪಿ ಅಂಶುಕುಮಾರ್, ಎಸಿಪಿ ಮಹೇಶ್ ಕುಮಾರ್, ಮಂಗಳೂರು ಉತ್ತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರಾಘವೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಇದನ್ನೂ ಓದಿ: ಮಂಗಳೂರು: ಲಾಡ್ಜ್ನಲ್ಲಿ ಕೇರಳದ ದಂಪತಿ ಆತ್ಮಹತ್ಯೆ
ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ: ತನ್ನ ಮೂವರು ಮಕ್ಕಳೊಂದಿಗೆ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಜಾರ್ಖಂಡ್ನ ಪಲಾಮು ಜಿಲ್ಲೆಯ ಮೇದಿನಿನಗರದಲ್ಲಿ ಮಾ.29ರಂದು ನಡೆದಿದೆ. ಮಹಿಳೆ ಮತ್ತು ಮೂವರು ಮಕ್ಕಳ ಶವಗಳು ರೈಲ್ವೆ ಟ್ರ್ಯಾಕ್ ಮೇಲೆ ಬಿದ್ದಿರುವುದು ಕಂಡುಬಂದಿತ್ತು. ಮಕ್ಕಳು 3 ರಿಂದ 7 ವರ್ಷದೊಳಗಿನವರು ಎಂದು ತಿಳಿದುಬಂದಿದೆ. ವಿಷಯ ತಿಳಿದ ಪಟ್ಟಣ ಪೊಲೀಸ್ ಠಾಣಾಧಿಕಾರಿ ಅಭಯ್ ಕುಮಾರ್ ಸಿನ್ಹಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಮಹಿಳೆಯನ್ನು ಮನಿತಾ ದೇವಿ ಎಂದು ಗುರುತಿಸಲಾಗಿದೆ. ಈಕೆ ಹರಿಹರಗಂಜ್ನ ರವಿ ಸಿಂಗ್ ಅವರನ್ನು ವಿವಾಹವಾಗಿದ್ದರು. ಮಾಹಿತಿಯ ಪ್ರಕಾರ, ಮಹಿಳೆ 20 ದಿನಗಳ ಹಿಂದೆ ಮನೆ ಬಿಟ್ಟು ಹೋಗಿದ್ದರು. ಬುಧವಾರ ಮಕ್ಕಳೊಂದಿಗೆ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪೊಲೀಸರು ಘಟನಾ ಸ್ಥಳದಿಂದ ಮೊಬೈಲ್ ಫೋನ್ ವಶಪಡಿಸಿಕೊಂಡು, ಎಲ್ಲ ಆಯಾಮದಿಂದಲೂ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಮೂವರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾದ ತಾಯಿ