ಮಂಡ್ಯ: ಐಸಿಯುನಲ್ಲುಂಟಾದ ವಿದ್ಯುತ್ ಸಮಸ್ಯೆಯಿಂದ ಕೊರೊನಾ ಸೋಂಕಿತ ಯುವಕ ದಾರುಣವಾಗಿ ಸಾವನಪ್ಪಿರುವ ಘಟನೆ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಮಂಗಳವಾರ ನಡೆದಿದೆ.
ಇಂಡುವಾಳು ಗ್ರಾಮದ ಸುನೀಲ್ (29) ಮೃತಪಟ್ಟ ಸೋಂಕಿತ. ಕಳೆದ 14 ದಿನದ ಹಿಂದೆ ಸುನೀಲ್ಗೆ ಸೋಂಕು ದೃಢಪಟ್ಟಿತ್ತು. ಮೊದಲ ಮೂರು ದಿನ ವೈದ್ಯರು ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಿದ್ದರು. ಮನೆಗೆ ಬಂದ ಎರಡು ದಿನದಲ್ಲಿ ಉಸಿರಾಟ ಸಮಸ್ಯೆ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಮತ್ತೆ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ಅಲ್ಲಿ ಆತನಿಗೆ ವೈದ್ಯರು ಐಸಿಯುನಲ್ಲಿ ವೆಂಟಿವೇಟರ್ ಅಳವಡಿಸಿದ್ದರು.
ಇಂದು ಮಧ್ಯಾಹ್ನ ವಿದ್ಯುತ್ ಸಂಪರ್ಕ ಕಡಿತವಾದಾಗ ಬ್ಯಾಕಪ್ ಇಲ್ಲದಿರುವುದರಿಂದ ಯುವಕ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಆಸ್ಪತ್ರೆಯಲ್ಲಿನ ಅವ್ಯವಸ್ಥೆಯಿಂದ ತಮ್ಮ ಸಹೋದರ ಮೃತಪಟ್ಟಿದ್ದಾನೆಂದು ಸುನೀಲ್ ಅಕ್ಕ ನಳಿನ ಕಿಡಿಕಾರಿದ್ದಾರೆ.
ಶವ ಕೊಡದೇ ಸತಾಯಿಸಿದ ವೈದ್ಯರು:
ಯುವಕನನ್ನು ಕಳೆದುಕೊಂಡ ದುಃಖದಲ್ಲಿ ಕೂಗಾಡಿದ್ದಕ್ಕೆ ಕುಟುಂಬಸ್ಥರ ವಿರುದ್ಧ ಆಸ್ಪತ್ರೆಯ ವೈದ್ಯರು ತಮ್ಮ ಹಲ್ಲೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಮೃತಪಟ್ಟು 4 ಗಂಟೆ ಕಳೆದರೂ ವೈದ್ಯರು ಮಾತ್ರ ಶವ ಕೊಡಲು ನಿರಾಕರಿಸಿದ್ದಾರೆ. ಸದ್ಯ ಜಿಲ್ಲಾಧಿಕಾರಿ ಅಶ್ವಥಿ ನೇತೃತ್ವದಲ್ಲಿ ಸಭೆ ನಡೆಸಿದ ಬಳಿಕ ವೈದ್ಯರು ಶವ ಹಸ್ತಾಂತರಿಸಿದ್ದಾರೆ.