ಮಂಡ್ಯ : ಹೊಂಬಾಳೆ ಫಿಲಂಸ್ ಸಹಯೋಗದಲ್ಲಿ ಜಿಲ್ಲಾಡಳಿತ ನಿರ್ಮಿಸಿರುವ ‘ಕೊರೊನಾ ಗೆಲ್ಲೋಣ’ ಜನ ಜಾಗೃತಿ ಗೀತೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಸೋಂಕು ನಿಯಂತ್ರಣಕ್ಕೆ ಸ್ಥಳೀಯ ಆಡಳಿತ ಕೈಗೊಂಡಿರುವ ಹಾಡು ಎಲ್ಲೆಡೆ ಸಾರ್ವಜನಿಕರ ಗಮನ ಸೆಳೆಯುತ್ತಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೋಮಶೇಖರ್ ಎಸ್.ಜಿಗಣಿ ಸಾಹಿತ್ಯ ಬರೆದು, ರಾಗ ಸಂಯೋಜಿಸಿ ನಿರ್ದೇಶಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ವೈದ್ಯರು, ಶುಶ್ರೂಷಕರು, ಪೊಲೀಸರು ಹಾಗೂ ಇತರ ಸಿಬ್ಬಂದಿ ಸೇವೆಯ ಮಹತ್ವ ಸಾರುತ್ತಲೇ ಜನರು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಗೀತೆಯಲ್ಲಿ ಅರಿವು ಮೂಡಿಸಲಾಗಿದೆ. ಆಸ್ಪತ್ರೆಗಳು, ವಿವಿಧ ಕೋವಿಡ್ ಕೇರ್ ಕೇಂದ್ರಗಳ ಚಿತ್ರಣವನ್ನು ವಿಡಿಯೋದಲ್ಲಿ ಬಳಸಿಕೊಳ್ಳಲಾಗಿದೆ.
ಗೀತೆಯಲ್ಲಿ ಪ್ರಖ್ಯಾತ ಗಾಯಕರು ಜಾಗೃತಿ ಗೀತೆಗೆ ಧ್ವನಿಯಾಗಿರುವುದು ವಿಶೇಷ. ಹಿನ್ನೆಲೆ ಗಾಯಕರಾದ ರಘು ದೀಕ್ಷಿತ್, ರಾಜೇಶ್ ಕೃಷ್ಣನ್, ಅಲೋಕ್, ನವೀನ್ ಸಜ್ಜು, ಎಂ ಡಿ ಪಲ್ಲವಿ, ಸುನೀತಾ, ಅನನ್ಯಾ ಭಟ್ ಮನದುಂಬಿ ಹಾಡಿದ್ದಾರೆ. ‘ಕೊರೊನಾ ಕೊರೊನಾ ಎಲ್ಲಾ ಸೇರಿ ಗೆಲ್ಲೋಣ, ನಿಯಮಗಳ ಪಾಲಿಸುತ ಮೃತ್ಯುಂಜಯರಾಗೋಣ’ ಎಂಬ ಸಾಲಿನಿಂದ ಆರಂಭವಾಗುವ ಗೀತೆ ಎಲ್ಲರ ಗಮನ ಸೆಳೆಯುತ್ತದೆ.
ಓದಿ:ಪತ್ನಿ ರೇವತಿ ಕಡೆಯಿಂದ ನಿಖಿಲ್ ಕುಮಾರಸ್ವಾಮಿಗೆ ಸಿಕ್ತು ಗುಡ್ ನ್ಯೂಸ್!