ಮಂಡ್ಯ : ಸಕ್ಕರೆ ನಾಡು ಮಂಡ್ಯದಲ್ಲಿ ಕೊರೊನಾ 2ನೇ ಅಲೆ ಅಬ್ಬರಿಸುತ್ತಿದೆ. ಹಳ್ಳಿ ಹಳ್ಳಿಗೂ ಸೋಂಕು ಹಬ್ಬುತ್ತಿದೆ. ಈಗಾಗಲೇ 950ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸೋಂಕು ಕಾಣಿಸಿದ್ದು, 140 ಗ್ರಾಮಗಳನ್ನ ಸೀಲ್‌ಡೌನ್ ಮಾಡಲಾಗಿದೆ.
ಜಿಲ್ಲೆಯ 1750 ಗ್ರಾಮಗಳ ಪೈಕಿ 950 ಹಳ್ಳಿಗಳಲ್ಲಿ ಸೋಂಕು ಕಾಣಿಸಿದೆ. 25ಕ್ಕೂ ಹೆಚ್ಚು ಮಂದಿಗೆ ಸೋಂಕು ದೃಢಪಟ್ಟಿರುವ 140 ಗ್ರಾಮಗಳನ್ನ ಈಗಾಗಲೇ ಸೀಲ್‌ಡೌನ್ ಮಾಡಲಾಗಿದೆ. ಆ್ಯಕ್ಟೀವ್ ಕೇಸ್ ಹಾಗೂ ಸಾವಿನ ಸಂಖ್ಯೆಯೂ ಹಳ್ಳಿಗಳಲ್ಲೇ ಹೆಚ್ಚಾಗಿದೆ. ಪಾಸಿಟಿವ್ ರೇಟ್ ನೋಡುವುದಾದರೆ ಹಳ್ಳಿಗಳಲ್ಲಿ ಶೇ.18.81ರಷ್ಟಿದೆ.
ಎರಡನೇ ಅಲೆಯಲ್ಲಿ ಗ್ರಾಮೀಣ ಪ್ರದೇಶದ175 ಮಂದಿ ಮೃತಪಟ್ಟಿದ್ದಾರೆ. ಸದ್ಯ ಜಿಲ್ಲೆಯಲ್ಲಿ 6281 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 3900 ಪ್ರಕರಣ ಹಳ್ಳಿಗಳದ್ದೇ ಆಗಿದೆ. ಸರ್ಕಾರ ಟೆಸ್ಟಿಂಗ್ ಕಡಿಮೆ ಮಾಡಿರೋದ್ರಿಂದ ಮತ್ತಷ್ಟು ಸೋಂಕು ಉಲ್ಬಣಗೊಳ್ಳುವ ಭೀತಿ ಇದೆ.
ಕರ್ಫ್ಯೂ ಜಾರಿ ಬಳಿಕ ಬೆಂಗಳೂರು ಸೇರಿ ಅನ್ಯ ಜಿಲ್ಲೆಗಳಲ್ಲಿ ಕೆಲಸ ಮಾಡ್ತಿದ್ದ ಸಾವಿರಾರು ಜನ ಸ್ವಗ್ರಾಮಗಳಿಗೆ ವಾಪಸಾಗಿದ್ದಾರೆ. ಈ ಪೈಕಿ ಕೆಲವರು ಸೋಂಕು ಹೊತ್ತು ತಂದಿದ್ರಿಂದ ಹಳ್ಳಿಗಳಲ್ಲಿ ವೈರಸ್ ಉಲ್ಬಣಿಸಲು ಕಾರಣ. ಇದರೊಂದಿಗೆ ಜಾತ್ರೆ, ಹಬ್ಬದ ಸಂದರ್ಭದಲ್ಲಿ ನಿರ್ಲಕ್ಷ್ಯ ತೋರಿದ್ದೂ ಕೂಡ ಹಳ್ಳಿಗಳಿಗೆ ಕಂಟಕವಾಗಿದೆ.
ಹಳ್ಳಿಗಳಲ್ಲಿ ಸೋಂಕು ನಿಯಂತ್ರಣ ಮಾಡಲು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದ್ದು, ಮನೆ ಮನೆ ಸರ್ವೆ ಕಾರ್ಯ ಆರಂಭಿಸಿದೆ.
ಲಕ್ಷಣ ಕಂಡು ಬಂದವರನ್ನು ಟೆಸ್ಟಿಂಗ್ಗೆ ಒಳಪಡಿಸಿ, ಸೋಂಕು ದೃಢಪಟ್ಟವರಿಗೆ ಚಿಕಿತ್ಸೆ ನೀಡುವ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಡಿಹೆಚ್ಒ ಡಾ.ಮಂಚೇಗೌಡ ತಿಳಿಸಿದ್ದಾರೆ.