ಮಂಡ್ಯ: ತನ್ನ ಭದ್ರಕೋಟೆಯಲ್ಲೇ ಸೋಲನ್ನು ಕಂಡ ಜೆಡಿಎಸ್ ಪಕ್ಷ ಮತ್ತೆ ಪುಟಿದೇಳಲು ಯೋಜನೆ ರೂಪಿಸುತ್ತಿದೆ. ಕೊರೊನಾ ನಡುವೆಯೂ ಪಕ್ಷ ಸಂಘಟನೆಗೆ ಮಾಜಿ ಸಿಎಂ ಕುಮಾರಸ್ವಾಮಿ ಯೋಜನೆ ರೂಪಿಸಿದ್ದು, ಪ್ರಮುಖ ಯುವ ನಾಯಕರ ಜೊತೆ ಜೂಮ್ ಆ್ಯಪ್ ಮೂಲಕ ಸಂವಾದ ನಡೆಸಿದ್ದಾರೆ.
ಲೋಕಸಭೆ ಚುನಾವಣೆ ಹಾಗೂ ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ಜೆಡಿಎಸ್ ಜಿಲ್ಲೆಯಲ್ಲಿ ಸೋಲು ಅನುಭವಿಸಿತ್ತು. ಹೀಗಾಗಿ ಪಕ್ಷದ ವರಿಷ್ಠರು ಸೋಲಿನ ಬಗ್ಗೆ ಆಂತರಿಕ ಅವಲೋಕನಕ್ಕೆ ಮುಂದಾಗಿ ಇದಕ್ಕೆ ಕಾರಣ ಹುಡುಕಲು ಮುಂದಾಗಿದ್ದರು. ಇದೀಗ ಕೆ.ಆರ್.ಪೇಟೆ ಯುವ ಜೆಡಿಎಸ್ ಮುಖಂಡರ ಜೊತೆ ಮಾಜಿ ಸಿಎಂ ವಿಡಿಯೋ ಕಾನ್ಫರೆನ್ಸ್ ಮಾಡಿದ್ದಾರೆ.
ಕೆ.ಆರ್.ಪೇಟೆ ಸೇರಿದಂತೆ ಜಿಲ್ಲೆಯಲ್ಲಿ ಜೆಡಿಎಸ್ ಬಲವರ್ಧನೆಗೆ ಕಾರ್ಯಕ್ರಮ ರೂಪಿಸಲು ಮಾಹಿತಿ ಸಂಗ್ರಹ ಮಾಡಿದ್ದಾರೆ ಎನ್ನಲಾಗಿದೆ. ಆಯ್ದ 50 ಮಂದಿಯ ಜೊತೆಯಷ್ಟೇ ಸಂವಾದ ಮಾಡಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ಕೊರೊನಾ ಹಿನ್ನೆಲೆ ಸಭೆ ಮಾಡಲು ಸಾಧ್ಯವಾಗದ ಕಾರಣ ಜೂಮ್ ಮೊರೆ ಹೋಗಿದ್ದಾರೆ. ಕೆಲವೇ ದಿನಗಳಲ್ಲಿ ಕಾರ್ಯಕರ್ತರ ಸಭೆ ಆಯೋಜನೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು, ಸ್ಥಳದ ಆಯ್ಕೆ ಮಾಡಬೇಕಾಗಿದೆ. ಸಭೆಗೆ ಜೆಡಿಎಸ್ ವರಿಷ್ಠರು ಸೇರಿದಂತೆ ಮಾಜಿ ಸಿಎಂ ಕುಮಾರಸ್ವಾಮಿ ಪಾಲ್ಗೊಳ್ಳಲಿದ್ದಾರೆ.