ಮಂಡ್ಯ: ಜಿಲ್ಲಾ ಹಾಲು ಒಕ್ಕೂಟಕ್ಕೆ ಹಾಲು ಸರಬರಾಜು ಮಾಡಲು ಟೆಂಡರ್ ಪಡೆದ ಗುತ್ತಿಗೆದಾರರು ಅಕ್ರಮವಾಗಿ ಟ್ಯಾಂಕರ್ಗೆ ಅರ್ಧ ಹಾಲು ಅರ್ಧ ನೀರು ಮಿಶ್ರಣ ಮಾಡಿ ಕಲಬೆರಕೆ ಹಾಲನ್ನು ಪೂರೈಕೆ ಮಾಡುವುದರೊಂದಿಗೆ ಮಹಾಮೋಸ ಎಸಗಿರುವ ಸಂಗತಿ ಸಕ್ಕರೆ ನಾಡಿನಲ್ಲಿ ಬೆಳಕಿಗೆ ಬಂದಿದೆ.
ಕಲಬೆರೆಕೆ ಹಾಲು ಪೂರೈಕೆ ಹಿಂದೆ ಒಕ್ಕೂಟದ ಲ್ಯಾಬ್ ಟೆಕ್ನಿಷಿಯನ್ ಮತ್ತು ಸಂಘದ ಕಾರ್ಯದರ್ಶಿ ಶಾಮೀಲಾಗಿರುವುದು ಮೇಲ್ನೋಟಕಕ್ಕೆ ಬೆಳಕಿಗೆ ಬಂದಿದೆ. ಈಗ ನಿಜವಾದ ಅಪರಾಧಿಗಳು ಯಾರು ಎನ್ನುವುದು ಗೊತ್ತಾಗಲಿದೆ.
ಕಲಬೆರಕೆ ಹಾಲು ಪೂರೈಕೆಯಾ0ಗುತ್ತಿರುವ ಬಗ್ಗೆ ಬಹಳ ದಿನಗಳಿಂದ ಅಧ್ಯಕ್ಷರು ಹಾಗೂ ನಿರ್ದೇಶಕರಿಗೆ ಅನುಮಾನಗಳಿದ್ದವು. ಯಾವ ಮೂಲದಿಂದ ಹುಡುಕಿದರೂ ಸುಳಿವು ಸಿಕ್ಕಿರಲಿಲ್ಲ. ಆದ್ರೆ, ಕೊನೆಗೂ ಮನ್‌ಮುಲ್ ಅಧ್ಯಕ್ಷರು, ತನಿಖಾಧಿಕಾರಿಗಳು ಹಗರಣವನ್ನು ಬಯಲಿಗೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಲಬೆರಕೆ ಹೇಗೆ?: ಹಾಲಿನ ಟ್ಯಾಂಕರ್ ವಾಹನಗಳಲ್ಲಿಯೇ ಅರ್ಧಭಾಗ ನೀರು ಶೇಖರಣೆಯಾಗಿರುವಂತೆ ಉಳಿದರ್ಧ ಭಾಗ ಹಾಲು ಶೇಖರಣೆಯಾಗುವಂತೆ ವಿನ್ಯಾಸ ಮಾಡಿ ಕೊಂಡು ಟ್ಯಾಂಕರ್‌ಗಳಿಗೆ ಹಾಲನ್ನು ತುಂಬಿಸಿ ಕೊಳ್ಳಲಾಗುತ್ತಿತ್ತು.
ಹಾಲು ತುಂಬುವ ಸಮಯದಲ್ಲೇ ನೀರು ಜೊತೆ ಸೇರಿಸಿಕೊಳ್ಳುವಂತೆ ಲಾರಿಯಲ್ಲೇ ಬ್ಯಾಟರಿ ವ್ಯವಸ್ಥೆಯೊಂದಿಗೆ ಸ್ವಿಚ್ ವ್ಯವಸ್ಥೆ ಮಾಡಿಕೊಂಡಿದ್ದರು.
ಗುತ್ತಿಗೆ ಪಡೆದ ವಾಹನಗಳನ್ನು ದುರಸ್ತಿ ನೆಪದಲ್ಲಿ ಬೇರೆ ಬೇರೆ ವಾಹನಗಳಲ್ಲಿ ಹಾಲನ್ನು ತುಂಬಿಸಿಕೊಂಡು ಉತ್ತಮವಾದ ಹಾಲನ್ನು ಖಾಸಗಿ ಡೇರಿಗಳಿಗೆ ಕಲಬೆರಕೆ ಹಾಲನ್ನು ಒಕ್ಕೂಟಕ್ಕೆ ಪೂರೈಸಲಾಗುತ್ತಿತ್ತು ಎಂದು ಮನ್‌ಮುಲ್ ಅಧ್ಯಕ್ಷ ಬಿ. ರಾಮಚಂದ್ರು ತಿಳಿಸಿದರು.
ಈ ರೀತಿಯಲ್ಲಿ ಹಾಲು ಪೂರೈಸಲು ಟೆಂಡರ್ ಪಡೆದ ಗುತ್ತಿಗೆದಾರರು ನಿತ್ಯ 6000 ಲೀಟರ್ ಹಾಲನ್ನು ಖಾಸಗಿ ಡೇರಿಗಳಿಗೆ ನೀಡಿ ದಿನ 1.44 ಲಕ್ಷ ರೂ. ಸಂಗ್ರಹಿಸಿಕೊಳ್ಳುತ್ತಿದ್ದರೆಂದು ಪ್ರಾಥಮಿಕ ತನಿಖಾ ಸಮಯದಲ್ಲಿ ತಿಳಿದು ಬಂದಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಿರುವುದಾಗಿ ಹೇಳಿದರು.
ತಿರುಮಲ ಡೇರಿಗೆ ಪೂರೈಕೆ : ಮನ್‌ಮುಲ್‌ನ ಬಿಆರ್‌ಸಿ ಕೇಂದ್ರಗಳಲ್ಲಿ ಸಂಗ್ರಹವಾದ ಹಾಲನ್ನು ಆಂಧ್ರಪ್ರದೇಶದ ತಿರುಮಲ ಡೇರಿಗೆ ಸರಬರಾಜು ಮಾಡಲಾಗುತ್ತಿತ್ತು ಎನ್ನುವುದು ಗೊತ್ತಾಗಿದೆ.
ಸೋಮನಹಳ್ಳಿಯಲ್ಲಿರುವ ನಂದಿ ಹೆಸರಿನ ಚಿಲ್ಲಿಂಗ್ ಸೆಂಟರ್‌ನಲ್ಲಿ ಹಾಲನ್ನು ಶೇಖರಿಸಿಟ್ಟುಕೊಂಡು ಅದನ್ನು ನಂತರ ತಿರುಮಲ ಡೇರಿಗೆ ರವಾನಿಸಲಾಗುತ್ತಿತ್ತು. ಕಳೆದೊಂದು ತಿಂಗಳಿನಿಂದ ನಿರಂತರವಾಗಿ ಇದು ನಡೆಯುತ್ತಿತ್ತೆಂದು ಒಕ್ಕೂಟದ ಮೂಲಗಳು ತಿಳಿಸಿವೆ.