ಮಂಡ್ಯ: ಸಕ್ಕರೆ ನಾಡಿನ ರೈತರು ಬೆಳೆ ರಕ್ಷಣೆಗಾಗಿ ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದು, ಇಂದು ಮಂಡ್ಯ ಹಾಗೂ ಮದ್ದೂರಿನಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.
ಮಂಡ್ಯದ ರೈತ ಸಂಘದ ಕಾರ್ಯಕರ್ತರು ನಗರದ ಕಾವೇರಿ ನೀರಾವರಿ ನಿಗಮದ ಕಚೇರಿ ಬಳಿ ಪೆಂಡಾಲ್ ಹಾಕಿಕೊಂಡು ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಈ ಧರಣಿ 3ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಮದ್ದೂರು ತಾಲೂಕಿನ ಗೆಜ್ಜಲಗೆರೆ ಸಮೀಪ ರೈತರು, ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಒಣಗುತ್ತಿರುವ ಬೆಳೆ ರಕ್ಷಣೆಗೆ ಶೀಘ್ರವಾಗಿ ನೀರು ಬಿಡುಗಡೆ ಮಾಡುವಂತೆ ಆಗ್ರಹಿಸಿದರು. ನೀರು ಬಿಡದೇ ಹೋದಲ್ಲಿ ನಾಳೆಯಿಂದ ನೀರಾವರಿ ಇಲಾಖೆಯೊಳಗೆ ನಮ್ಮ ಹಸು, ಕೋಳಿ ಕುರಿಗಳನ್ನ ಕೂಡಿ ಹಾಕುತ್ತೇವೆ. ಈ ಬಗ್ಗೆ ತಕ್ಷಣವೇ ಎಚ್ಚೆತ್ತುಕೊಂಡು ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ನೀರು ಬಿಡಬೇಕು ಎಂದು ಎಚ್ಚರಿಸಿದ್ದಾರೆ.
ನೀರಿಗಾಗಿ ಜಿಲ್ಲಾದ್ಯಂತ ಹೋರಾಟ ಹೆಚ್ಚಾಗಿದ್ದು, ಅತ್ತ ಜಿಲ್ಲಾಡಳಿತ ನೀರು ಬಿಡಲು ಸಾಧ್ಯವೇ ಇಲ್ಲ ಎಂದು ಹೇಳಿದೆ. ಇನ್ನು, ಮಳೆಯ ಆಧಾರದ ಮೇಲೆ ನೀರು ಬಿಡುಗಡೆ ಮಾಡುವ ಸಾಧ್ಯತೆ ಇದೆ.