ಮಂಡ್ಯ : ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದ ಮದ್ದೂರು ಕ್ಷೇತ್ರದ ಅಭ್ಯರ್ಥಿ ಹೆಸರನ್ನು ಕಾಂಗ್ರೆಸ್ ತನ್ನ ಮೂರನೇ ಪಟ್ಟಿಯಲ್ಲಿ ಘೋಷಣೆ ಮಾಡಿದೆ. ಈ ಬೆನ್ನಲ್ಲೇ ಮದ್ದೂರು ಕಾಂಗ್ರೆಸ್‌ನಲ್ಲಿ ಬಂಡಾಯದ ಬೇಗುದಿ ನಿರ್ಮಾಣವಾಗಿದೆ. ವಲಸಿಗರಿಗೆ ಟಿಕೆಟ್ ನೀಡಿರುವುದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಮದ್ದೂರು ವಿಧಾನಸಭಾ ಕ್ಷೇತ್ರದ ಟಿಕೆಟನ್ನು ಕಾಂಗ್ರೆಸ್ ಪಕ್ಷವು ಕದಲೂರು ಉದಯ್ ಎಂಬವರಿಗೆ ಘೋಷಣೆ ಮಾಡಿದೆ. ಈ ಕ್ಷೇತ್ರಕ್ಕೆ ಮಾಜಿ ಸಿಎಂ ಎಸ್.ಎಂ.ಕೃಷ್ಣರ ಸಹೋದರನ ಪುತ್ರ ಎಸ್.ಗುರುಚರಣ್ ಹಾಗೂ ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಯಾಗಿದ್ದ ಕದಲೂರು ಉದಯ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಆದರೆ ಕಾಂಗ್ರೆಸ್ ಹೈಕಮಾಂಡ್ ಕದಲೂರು ಉದಯ್ ಅವರಿಗೆ ಮಣೆ ಹಾಕಿದೆ.
ಇನ್ನು, ಎಸ್. ಗುರುಚರಣ್‌ಗೆ ಕ್ಷೇತ್ರದ ಟಿಕೆಟ್ ಕೈ ತಪ್ಪಿದ್ದಕ್ಕೆ ಎಸ್.ಎಂ.ಕೃಷ್ಣ ಅವರ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು. ಕೈ ಕಾರ್ಯಕರ್ತರು ಬೆಂಗಳೂರು - ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಪಕ್ಷದ ನಾಯಕರ ಭಾವಚಿತ್ರವನ್ನು ಸುಟ್ಟು ಆಕ್ರೋಶ ಹೊರಹಾಕಿದರು.
ಇನ್ನೊಂದೆಡೆ, ನಗರದಲ್ಲಿ ಟಿಕೆಟ್ ವಂಚಿತ ಎಸ್.ಗುರುಚರಣ್ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪಕ್ಷಕ್ಕಾಗಿ ದುಡಿದ ಗುರುಚರಣ್ ಅವರನ್ನು ಬಿಟ್ಟು ನಿನ್ನೆ ಮೊನ್ನೆ ಬಂದವರಿಗೆ ಟಿಕೆಟ್ ಮಾರಾಟ ಮಾಡಿದ್ದಾರೆ ಆರೋಪಿಸಿದರು.
ದುಡ್ಡು ಬೇಕು ಅಂದಿದ್ದರೆ ಕಾರ್ಯಕರ್ತರೇ ಸೇರಿ ಕೊಡುತ್ತಿದ್ದೆವು. 15 ವರ್ಷದಿಂದ ಗುರುಚರಣ್‌ಗೆ ಕಾಂಗ್ರೆಸ್ ಮೋಸ ಮಾಡಿಕೊಂಡು ಬಂದಿದೆ. ಡಿ.ಕೆ.ಶಿವಕುಮಾರ್ ಎಷ್ಟೋ ಜನರಿಗೆ ಈ ರೀತಿ ಮೋಸ ಮಾಡಿದ್ದಾರೆ. ನಿಮಗೆ ತಕ್ಕ ಬುದ್ದಿ ಕಲಿಸುತ್ತೇವೆ ಎಂದು ಹೇಳಿದರು. ಇದೇ ವೇಳೆ ಡಿಕೆಶಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪ್ರಿಯಾಂಕ ಅವರು ತಮ್ಮ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದರು. ಇಬ್ಬರು ಪುರಸಭಾ ಸದಸ್ಯರು ತಮ್ಮ ಸದಸ್ಯ ಸ್ಥಾನಕ್ಕೆ ಮತ್ತು ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದರು.
ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಎಸ್.ಗುರುಚರಣ್, ಕಾರ್ಯಕರ್ತರಿದ್ದರೇ ಗುರುಚರಣ್ ಇರುತ್ತಾರೆ. ನಿಮ್ಮೆಲ್ಲರ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ. ಇನ್ನೊಂದು ಸಲ ವಿಮರ್ಶೆ ಮಾಡಿ ನನ್ನ ನಿರ್ಧಾರವನ್ನು ತಿಳಿಸುತ್ತೇನೆ. ಕೆಲವು ಕಾಣದ ಕೈಗಳು ನನಗೆ ಟಿಕೆಟ್ ತಪ್ಪಿಸಿದ್ದಾರೆ. ನಮ್ಮ ಶಕ್ತಿ ಏನಿದೆ ಎಂಬುದನ್ನು ತೋರಿಸಬೇಕಿದೆ. ಇನ್ನು ಎರಡ್ಮೂರು ದಿನಗಳಲ್ಲಿ ಒಂದು ನಿರ್ಧಾರ ತಿಳಿಸುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ : ಬಿಜೆಪಿ ಮುಳುಗಿಸಿದ ಕೀರ್ತಿ ಯಡಿಯೂರಪ್ಪನವರಿಗೆ ಸಲ್ಲುತ್ತದೆ: ಲಕ್ಷ್ಮಣ್ ಸವದಿ