ಮಂಡ್ಯ: ಸಕ್ಕರೆ ಜಿಲ್ಲೆಯ ರಾಜಕೀಯ ಅಖಾಡ ಹಲವು ಕುತೂಹಲಕ್ಕೆ ಕಾರಣವಾಗಿದೆ. ಅದರಲ್ಲೂ 23ರ ಫಲಿತಾಂಶದ ಮೇಲೆ ಕೆಲವರ ಭವಿಷ್ಯವೂ ಅಡಗಿದೆ ಎಂದು ಹೇಳಲಾಗಿದೆ. ಜೆಡಿಎಸ್ ಭದ್ರಕೋಟೆ ಪಕ್ಷೇತರ ಅಭ್ಯರ್ಥಿ ಪಾಲಾದರೆ ಯಾರೆಲ್ಲಾ ಭವಿಷ್ಯ ರೂಪಿಸಿಕೊಳ್ಳಬಹುದು, ಒಂದು ವೇಳೆ ನಿಖಿಲ್ ಗೆದ್ದರೆ ಕಾಂಗ್ರೆಸ್‌ನ ಮುಂದಿನ ಭವಿಷ್ಯ ಏನು ಅನ್ನೋದು ಇಲ್ಲಿದೆ.
ಲೋಕಸಭಾ ಚುನಾವಣಾ ಪಲಿತಾಂಶಕ್ಕೂ ಮೊದಲೇ ಜೆಡಿಎಸ್-ಕಾಂಗ್ರೆಸ್ ನಾಯಕರು ಟಾಕ್ ವಾರ್ ಶುರು ಮಾಡಿದ್ದಾರೆ. ಈ ಟಾಕ್ ವಾರ್ ರಾಜಕೀಯ ನಾಯಕರ ನಡುವಿನ ಜಿದ್ದಾಜಿದ್ದಿ ತೋರಿಸುತ್ತಿದ್ದರೆ, ಫಲಿತಾಂಶ ಹಲವು ನಾಯಕರ ಭವಿಷ್ಯ ರೂಪಿಸಲಿದೆ. ಜೊತೆಗೆ ಕಾಂಗ್ರೆಸ್‌ನ ಅಳಿವು ಉಳಿವಿನ ಪ್ರಶ್ನೆಯೂ ಈ ಪಲಿತಾಂಶದಲ್ಲಿ ಅಡಗಿದೆ.
ಸೋಲು ಗೆಲುವು- ಭವಿಷ್ಯ ಇಲ್ಲಿದೆ:
ಸುಮಲತಾ ಅಂಬರೀಶ್ ಗೆಲವು ಹಲವು ಕಾಂಗ್ರೆಸ್ ನಾಯಕರ ಭವಿಷ್ಯವನ್ನು ಉಜ್ವಲಗೊಳಿಸುವ ಸಾಧ್ಯತೆ ಇದೆ. ಈಗಾಗಲೇ ಮಂಡ್ಯ ಜೆಡಿಎಸ್ ಭದ್ರಕೋಟೆ ಎಂದು ಹೇಳಲಾಗುತ್ತಿದೆ. ಈ ಕೋಟೆಯನ್ನು ಸುಮಲತಾ ಛಿದ್ರಗೊಳಿಸಿದರೆ ಕಾಂಗ್ರೆಸ್ ಮುಖಂಡರಾದ ಚಲುವರಾಯಸ್ವಾಮಿ, ನರೇಂದ್ರ ಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ ಹಾಗೂ ಕೆ.ಬಿ. ಚಂದ್ರಶೇಖರ್ ಹಾಗೂ ರೈತ ಸಂಘದ ದರ್ಶನ್ ಪುಟ್ಟಣ್ಣಯ್ಯರ ರಾಜಕೀಯ ಭವಿಷ್ಯ ಉನ್ನತವಾಗಲಿದೆ.
ಸುಮಲತಾ ಅಂಬರೀಶ್ ಗೆಲುವು ಸಾಧಿಸಿದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಈ ನಾಯಕರುಗಳ ಪರ ಕೆಲಸ ಮಾಡುವ ಸಾಧ್ಯತೆ ಇದೆ. ಸುಮಲತಾ ಬೆಂಬಲ ಗೆಲುವಿಗೆ ಸಹಕಾರಿಯಾಗಲಿದೆ. ಮುಂದಿನ ಚುನಾವಣೆ ಮೇಲೆ ಕಣ್ಣಿಟ್ಟಿರುವ ಈ ನಾಯಕರು ಸುಮಲತಾ ಬೆಂಬಲ ಪಡೆದರಷ್ಟೇ ಜೆಡಿಎಸ್ ವಿರುದ್ಧ ಸೆಣೆಸಾಡಲು ಸಾಧ್ಯವಾಗಲಿದೆ.
ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲುವು ಸಾಧಿಸಿದರೆ ಜೆಡಿಎಸ್ ಭದ್ರಕೋಟೆ ಉಕ್ಕಿನ ಕೋಟೆಯಾಗಲಿದೆ. ಮುಂದಿನ ಚುನಾವಣೆಯಲ್ಲೂ ಜೆಡಿಎಸ್ 7 ಕ್ಕೆ 7 ಕ್ಷೇತ್ರದಲ್ಲೂ ಗೆಲುವು ಸಾಧಿಸಲಿದೆ. ಇದು ಕಾಂಗ್ರೆಸ್ ಹಿಡಿತದಿಂದ ಸಂಪೂರ್ಣವಾಗಿ ಬಿಡುಗಡೆಯಾಗಿ ಸ್ಥಳೀಯ ಸಂಸ್ಥೆಯಿಂದ ಹಿಡಿದು ಎಲ್ಲವೂ ಜೆಡಿಎಸ್ ತೆಕ್ಕೆಗೆ ಹೋಗಲಿದೆ.
ಜೊತೆಗೆ ದೇವೇಗೌಡರ ಕುಟುಂಬದ ಬಿಗಿ ಹಿಡಿತ ಜಿಲ್ಲೆಯ ಮೇಲೆ ಬೀಳಲಿದೆ. ಚಲುವರಾಯಸ್ವಾಮಿ, ನರೇಂದ್ರ ಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ ಸೇರಿದಂತೆ ಕೆಲವು ನಾಯಕರು ರಾಜಕೀಯ ಭವಿಷ್ಯಕ್ಕಾಗಿ ಜಿಲ್ಲೆಯನ್ನು ಬಿಡಬೇಕಾಗಿ ಬರಬಹುದು. ಇಲ್ಲವೇ ರಾಜಕೀಯದಿಂದಲೇ ದೂರ ಉಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು. ಹೀಗೆ 23 ರ ಫಲಿತಾಂಶ ಹಲವು ನಾಯಕರ ಭವಿಷ್ಯದ ಜೊತೆಗೆ ಜಿಲ್ಲೆಯ ಕಾಂಗ್ರೆಸ್ ಭವಿಷ್ಯವೂ ನಿಂತಿದೆ ಎಂದು ಹೇಳಬಹುದಾಗಿದೆ. ಕೆಲ ರಾಜಕೀಯ ನಾಯಕರ ಭವಿಷ್ಯ ಕಾಣಲು ಫಲಿತಾಂಶ ಒಂದೇ ಸಾಕಾಗಿದೆ.