ಮಂಡ್ಯ: ಆ್ಯಂಬುಲೆನ್ಸ್ ವಿಚಾರದಲ್ಲಿ ರಾಜಕೀಯ ಮಾಡಿದ್ದ ಶಾಸಕ ಸಿ.ಎಸ್. ಪುಟ್ಟರಾಜು ಅವರು ಈಗ ವಿಕಲಚೇತನರಿಗೆ ಫುಡ್‌ಕಿಟ್ ವಿತರಣೆ ವಿಚಾರದಲ್ಲೂ ರಾಜಕೀಯ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಬಿ. ರೇವಣ್ಣ ಆರೋಪಿಸಿದರು.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ವಿಕಲಚೇತನರಿಗೆ ಫುಡ್‌ಕಿಟ್ ವಿತರಿಸಿದ್ದು, ಪುರಸಭೆ ಮುಖ್ಯಾಧಿಕಾರಿ ಮೂಲಕ ಪೊಲೀಸ್ ಠಾಣೆಯಲ್ಲಿ ನನ್ನ ಹಾಗೂ ನನ್ನ ಇಬ್ಬರು ಬೆಂಬಲಿಗರ ಮೇಲೆ ಕೊರೊನಾ ಸೋಂಕು ಉಲ್ಲಂಘನೆ ಆರೋಪದಡಿ ದೂರು ದಾಖಲಿಸಿದ್ದಾರೆ ಎಂದು ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಅವರೇ ಖುದ್ದಾಗಿ ಪೌರಕಾರ್ಮಿಕರಿಗೆ ಆಹಾರ ಕಿಟ್‌ಗಳನ್ನು ವಿತರಿಸಿದ್ದರು. ತಾಲೂಕಿನ ಎಲ್ಲ ವಿಕಲಚೇತನರಿಗೆ ಆಹಾರದ ಕಿಟ್‌ಗಳನ್ನು ವಿತರಿಸಲು ಅನುಮತಿಯನ್ನು ಮೌಖಿಕವಾಗಿ ಪಡೆದುಕೊಂಡಿದ್ದೆವು.
ಅದರಂತೆ ಆಹಾರ ಕಿಟ್‌ಗಳನ್ನು ವಿತರಿಸಿದ ನಂತರ ಶಾಸಕರು ಮುಖ್ಯಾಧಿಕಾರಿ ಮೇಲೆ ಒತ್ತಡ ತಂದು ನಮ್ಮ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿದರು. ಜತೆಗೆ ಕ್ಷೇತ್ರದಲ್ಲಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.
ಇದನ್ನೂ ಓದಿ: ವಿಶೇಷಚೇತನರಿಗೆ ಕಿಟ್ ವಿತರಿಸುವಾಗ ಕೋವಿಡ್ ನಿಯಮ ಉಲ್ಲಂಘನೆ.. ಮಂಡ್ಯದಲ್ಲಿ ಎಫ್ಐಆರ್ ದಾಖಲು
ಕೊರೊನಾ ಸಂಕಷ್ಟ ಸಮಯದಲ್ಲಿ ದಾನಿಗಳ ನೆರವು ಪಡೆಯಿರಿ, ದಾನಿಗಳಿಗೆ ತೊಂದರೆ ಕೊಡಬೇಡಿ ಎಂದು ಸರ್ಕಾರವೇ ಹೇಳಿದ್ದರೂ ಅಧಿಕಾರಿಗಳು ಸರ್ಕಾರಕ್ಕೆ ಅಧೀನವಾಗಿ ಕೆಲಸ ಮಾಡದೇ ಶಾಸಕರ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ.
ಜಿಲ್ಲಾಡಳಿತದ ಜವಾಬ್ದಾರಿ ಹೊತ್ತಿರುವ ಜಿಲ್ಲಾಧಿಕಾರಿ ಕೂಡಲೇ ಪ್ರಕರಣದ ಗಂಭೀರತೆ ಅರ್ಥ ಮಾಡಿಕೊಂಡು ತಕ್ಷಣ ಪ್ರಕರಣವನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.