ಮಂಡ್ಯ: ಬಿಜೆಪಿ ಅಭ್ಯರ್ಥಿಗಳ ಘೋಷಣೆ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಅಲರ್ಟ್ ಆಗಿದ್ದಾರೆ. ಭಿನ್ನಮತ ಸ್ಪೋಟದಿಂದ ಎಚ್ಚೆತ್ತ ನಾಯಕರು ಅಸಮಾಧಾನಿತರೊಂದಿಗೆ ಸಭೆ ನಡೆಸುವ ಮೂಲಕ ಟಿಕೆಟ್ ಆಕಾಂಕ್ಷಿತರ ಭಿನ್ನಮತ ಶಮನಕ್ಕೆ ಮುಂದಾಗಿದ್ದಾರೆ. ಮಂಡ್ಯದ ಕಾಂಗ್ರೆಸ್ ಕಚೇರಿಯಲ್ಲಿ ಆಕಾಂಕ್ಷಿತರೊಂದಿಗೆ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ನೇತೃತ್ವದಲ್ಲಿ ಸಭೆ ನಡೆಯಿತು. ಕ್ಷೇತ್ರದ ಟಿಕೆಟ್ ಬಯಸಿ 16 ಮಂದಿ ಅರ್ಜಿ ಹಾಕಿದ್ದರು. ಈ ಅಭ್ಯರ್ಥಿಗಳಲ್ಲಿ ಪಿ.ರವಿಕುಮಾರ್‌ಗೆ ಟಿಕೆಟ್ ಘೋಷಣೆಯಾಗಿತ್ತು. ಬಳಿಕ ಆಕಾಂಕ್ಷಿತರು ಅಸಮಾಧಾನಗೊಂಡಿದ್ದರು.
ಅಂಜನಾ ಶ್ರೀಕಾಂತ್, ಯೂಥ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಚಿದಂಬರ್, ಹೊಸಹಳ್ಳಿ ಶಿವಲಿಂಗೇಗೌಡ, ಹಾಲಹಳ್ಳಿ ಅಶೋಕ್‌ರೊಂದಿಗೆ ಚರ್ಚೆ ನಡೆಸಿ ಸಮಾಧಾನಪಡಿಸಲು ಮಧು ಜಿ. ಮಾದೇಗೌಡ ಮುಂದಾಗಿದ್ದಾರೆ. ಪಕ್ಷದ ತೀರ್ಮಾನದಂತೆ ಭಿನ್ನಮತ ಇಲ್ಲದೇ ಕೆಲಸ ಮಾಡಬೇಕು. ಪಕ್ಷ ನಿಷ್ಠೆಯಿಂದ ದುಡಿಯುವ ಬಗ್ಗೆ ಸೂಚನೆ ನೀಡಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ಮಾತನಾಡಿ, ಚುನಾವಣೆ ಪ್ರಕ್ರಿಯೆ ಚುರುಕುಗೊಳಿಸಿದ್ದೇವೆ. ನಮ್ಮ ನಾಯಕರ ನೇತೃತ್ವದಲ್ಲಿ ಚುನಾವಣೆ ನಡೆಯುತ್ತದೆ. ಏ.19 ರಂದು ರವಿಕುಮಾರ್ ನಾಮಪತ್ರ ಸಲ್ಲಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿ ನಾಮಪತ್ರ ಸಲ್ಲಿಕೆಗೆ ಬರಬೇಕು. ಅಸಮಾಧಾನಿತರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗಿದೆ. ಮಂಡ್ಯ ಕ್ಷೇತ್ರದ ಅಭ್ಯರ್ಥಿ ಗೆಲ್ಲಿಸುವ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದರು.
ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಮಾತನಾಡಿ, ಮಂಡ್ಯ ಕ್ಷೇತ್ರಕ್ಕೆ ಗಾಣಿಗ ರವಿಕುಮಾರ್ ಅಭ್ಯರ್ಥಿ. ಏ.19 ರಂದು ನಾಮಪತ್ರ ಸಲ್ಲಿಸಲಾಗುತ್ತದೆ. ಚುನಾವಣೆ ರೂಪುರೇಷೆ ಬಗ್ಗೆ ಚರ್ಚಿಸಲಾಗಿದೆ. ಕಾರ್ಯತಂತ್ರದ ಬಗ್ಗೆಯೂ ಚರ್ಚೆ ನಡೆದಿದೆ. ಅಭ್ಯರ್ಥಿಯನ್ನು ಗೆಲ್ಲಿಸಲು ಎಲ್ಲ ಕಾರ್ಯತಂತ್ರ ನಡೆದಿದೆ ಎಂದರು.
ಆತ್ಮಾನಂದ ಹಿರಿಯ ಮುಖಂಡರು. ಯಾವುದೇ ರೀತಿಯಿಂದಲೂ ಕಾಂಗ್ರೆಸ್ಗೆ ತೊಂದರೆ ಮಾಡಲ್ಲ.
ಸ್ಪಲ್ಪ ಗೊಂದಲ ಇದೆ. ಅದನ್ನು ನಾವು ಸರಿಪಡಿಸುತ್ತೇವೆ. ಟಿಕೆಟ್ ಬದಲಾವಣೆ ವಿಚಾರ ಹೈಕಮಾಂಡ್ ಗೆ ಬಿಟ್ಟಿದ್ದು. ಇದುವರೆಗೆ ಡೆಲ್ಲಿಗೆ ಯಾರೂ ಹೋಗಿಲ್ಲ. ಸಿದ್ದರಾಮಯ್ಯ, ಡಿಕೆಶಿ ಅವರನ್ನು ಭೇಟಿ ಮಾಡಿರಬಹುದು ಅಷ್ಟೇ ಎಂದು ಹೇಳಿದರು.
ಮದ್ದೂರು ಕ್ಷೇತ್ರದ ಅಭ್ಯರ್ಥಿ ನಾಳೆ ಘೋಷಣೆಯಾಗುವ ಸಾಧ್ಯತೆ ಇದೆ. ಟಿಕೆಟ್ ಯಾರಿಗೆ ಸಿಗುತ್ತೆ ಅನ್ನೋದು ಗೊತ್ತಿಲ್ಲ. ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ದ. ಯಾರಿಗೆ ಕೊಟ್ಟರೂ ಕಾಂಗ್ರೆಸ್ ಕಾರ್ಯಕರ್ತರನಾಗಿ ಕೆಲಸ ಮಾಡ್ತೇವೆ. ಗೆಲ್ಲುವಂತ ಶಕ್ತಿ ಇರುವವರಿಗೆ ಟಿಕೆಟ್ ಕೊಡ್ತಾರೆ ಎಂದು ತಿಳಿಸಿದರು.
ಇದನ್ನೂಓದಿ: ಸೋಮಣ್ಣನಾದ್ರೂ ಬರಲಿ, ಯಾರಾದ್ರೂ ಬರಲಿ ವರುಣಾದಲ್ಲಿ ಗೆಲುವು ನನ್ನದೇ: ಸಿದ್ದರಾಮಯ್ಯ