ಮಂಡ್ಯ: ಬಿಜೆಪಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಬರಲು ರೆಡಿ ಇದ್ದಾರೆ. ಆದ್ರೆ ಯಾರ್ಯಾರು ಎಂದು ಹೇಳಿದ್ರೆ ನೀವು ಬ್ಲಾಸ್ಟ್ ಮಾಡ್ಬಿಡ್ತೀರಿ ಎಂದು ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.
ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲೂಕಿನ ಅಕ್ಕಿಹೆಬ್ಬಾಳ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರು ಬಿಜೆಪಿ ಸಂಪರ್ಕದಲ್ಲಿರುವುದು ಸತ್ಯ. ಇನ್ನೂ 25 ವರ್ಷ ಬಿಜೆಪಿ ಸರ್ಕಾರವನ್ನು ಯಾರೂ ಟಚ್ ಮಾಡಲು ಸಾಧ್ಯವಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡೂ ಪಕ್ಷಗಳ ಶಾಸಕರು ನಮ್ಮ ಪಕ್ಷಕ್ಕೆ ಬರಲು ಸಿದ್ಧರಿದ್ದಾರೆ. ಸದ್ಯಕ್ಕೆ ನಮಗೆ ಅವಶ್ಯಕತೆ ಇಲ್ಲ. ಚುನಾವಣೆಗೆ ಎರಡೂವರೆ ವರ್ಷ ಬಾಕಿಯಿದೆ. ಸಮಯ ಬಂದಾಗ ಹೇಳುತ್ತೇನೆ ಎಂದರು.
ರಾಮ ಮಂದಿರ ನಿಧಿ ಸಂಗ್ರಹಣೆ ವಿಚಾರದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹಣ ಕೊಡೋದಕ್ಕೆ ಇಷ್ಟ ಇಲ್ಲ ಅಂದ್ರೆ ಕೊಡೋದು ಬೇಡ. ಅದನ್ನು ಬಿಟ್ಟು ಈ ರೀತಿ ಮಾತನಾಡುವುದು ಸರಿಯಲ್ಲ. ಒಂದು ದೇವಸ್ಥಾನ ಕಟ್ಟಲಾಗುತ್ತಿದೆ. ಸುಪ್ರೀಂ ಕೋರ್ಟ್ ಕೂಡ ಅನುಮತಿ ನೀಡಿದೆ. ಯಾಕೆ ಟೀಕೆ ಟಿಪ್ಪಣಿ ಮಾಡ್ತಿದ್ದಾರೆ ಅಂತ ಗೊತ್ತಿಲ್ಲ. ಹಣ ನೀಡದ ಮನೆಗಳಿಗೆ ಮಾರ್ಕ್ ಮಾಡುತ್ತಿರುವ ಹೇಳಿಕೆ ನಾನು ಕೇಳಿಸಿಕೊಂಡಿಲ್ಲ. ಆ ರೀತಿ ಎಲ್ಲೂ ನಡೆಯುತ್ತಿಲ್ಲ ಎಂದರು.