ಮಂಡ್ಯ/ದಕ್ಷಿಣ ಕನ್ನಡ: ಜೈನ ಧರ್ಮದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ನ್ಯೂ ಕಾಂಗ್ರೆಸ್ ಕಾರ್ಯಾಧ್ಯಕ್ಷ ಅಯೂಬ್ ಖಾನ್ ವಿರುದ್ಧ ಜೈನ ಸಮಾಜವು ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದೆ.
ಅನಂತನಾಥಸ್ವಾಮಿ ದಿಗಂಬರ ಜೈನ ಸಮಾಜದಿಂದ ದೂರು ದಾಖಲಿಸಲಾಗಿದೆ. ಇತ್ತೀಚೆಗೆ ಸ್ಥಳೀಯ ಖಾಸಗಿ ಚಾನೆಲ್‌ನಲ್ಲಿ ಹಿಜಾಬ್ ಪರ ಹೇಳಿಕೆ ನೀಡುವಾಗ ಗೊಮ್ಮಟೇಶ್ವರನ ವಿರುದ್ಧ ಅಯೂಬ್ ಖಾನ್ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಹೇಳಿಕೆಯಿಂದ ಜೈನ ಧರ್ಮದ ಅನುಯಾಯಿಯಗಳಾದ ನಮಗೆ ನೋವಾಗಿದೆ. ನಾವು ಆರಾಧಿಸುವ ದೇವರಿಗೆ ಅವಹೇಳನಕಾರಿಯಾಗಿ ನಿಂದಿಸಿರುವುದು ಸರಿಯಲ್ಲ. ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಮೈಸೂರು ನಿವಾಸಿ ಅಯೂಬ್ ಖಾನ್ ಮೇಲೆ ಧಾರ್ಮಿಕ ನಿಂದನೆ, ಜಾತಿ ನಿಂದನೆ ಅಪರಾಧದಡಿ ಕಾನೂನು ಕ್ರಮ ತೆಗೆದುಕೋಳ್ಳಬೇಕು ಎಂದು ಜೈನ್ ಸಮುದಾಯದ ಮುಖಂಡರು ಆಗ್ರಹಿಸಿದ್ದಾರೆ.
ಪುತ್ತೂರಲ್ಲೂ ದೂರು:
![ಜೈನ್ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆ: ಮುಸ್ಲಿಂ ಮುಖಂಡನ ವಿರುದ್ಧ ದೂರು](https://etvbharatimages.akamaized.net/etvbharat/prod-images/kn-mng-01-jain-manavi-police-puttur-script-kac10010_10022022173220_1002f_1644494540_374.jpg)
ಮೈಸೂರಿನ ನ್ಯೂ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಯೂಬ್ ಖಾನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪುತ್ತೂರಿನ ಭಾರತೀಯ ಜೈನ ಮಿಲನ್ ನಿಯೋಗ ನಗರ ಪೊಲೀಸ್ ಠಾಣೆಯಲ್ಲಿ ಎಡಿಷನಲ್ ಎಸ್ಪಿ ಕುಮಾರಚಂದ್ರ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಜೈನ ಧರ್ಮದ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿರುವವರ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 153(ಎ), (ಬಿ), 295(ಎ), 298, 506 ಮತ್ತು 76 ಐಟಿ ಕಾಯ್ದೆಯ ಅಡಿಯಲ್ಲಿ ಕಾನೂನು ಪ್ರಕಾರ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
![ಜೈನ್ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆ: ಮುಸ್ಲಿಂ ಮುಖಂಡನ ವಿರುದ್ಧ ದೂರು](https://etvbharatimages.akamaized.net/etvbharat/prod-images/kn-mng-01-jain-manavi-police-puttur-script-kac10010_10022022173220_1002f_1644494540_1047.jpg)