ಮಂಡ್ಯ: ಜಿಲ್ಲೆಯಲ್ಲಿ ಸಿಎಂ ಪುತ್ರ ಬಿ. ವೈ. ವಿಜಯೇಂದ್ರ ಸದ್ದಿಲ್ಲದೇ ರೋಗಿಗಳ ಸೇವೆ ಮಾಡುತ್ತಿದ್ದಾರೆ. ತಮ್ಮ ಸಂಸ್ಥೆ ವತಿಯಿಂದ ತುರ್ತು ಅವಶ್ಯಕತೆ ಇರುವ ಕುಟುಂಬಗಳಿಗೆ ಸಾವಿರಾರು ರೂಪಾಯಿ ಮೌಲ್ಯದ ಔಷಧಿಗಳನ್ನು ಬೆಂಬಲಿಗರ ಮೂಲಕ ವಿತರಣೆ ಮಾಡಿಸುತ್ತಿದ್ದಾರೆ.
ಮಳವಳ್ಳಿ ತಾಲೂಕಿನ ಹಲಗೂರಿನ ಶಾಂತಕುಮಾರಿ ಎಂಬುವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಲಾಕ್ಡೌನ್ನಿಂದಾಗಿ ಔಷಧಿ ಸಿಗದೆ ಇದ್ದಾಗ ಆಗ ಶಾಂತಕುಮಾರಿ ಪತಿ ಸರ್ಪೇಶ್ ಅವರು ಬಿಜೆಪಿ ಮುಖಂಡರ ಮೊರೆ ಹೋಗಿದ್ದರು. ಈ ಸಮಸ್ಯೆಯನ್ನು ಬಿಜೆಪಿ ಮುಖಂಡರು ವಿಜಯೇಂದ್ರ ಅವರ ಗಮನಕ್ಕೆ ತಂದಿದ್ದರು. ವಿಚಾರ ತಿಳಿದ ಸಿಎಂ ಪುತ್ರ ಸುಮಾರು ಒಂದು ತಿಂಗಳಿಗೆ ಆಗುವಷ್ಟು ಔಷಧಿಗಳನ್ನು ಕಳುಹಿಸಿಕೊಟ್ಟಿದ್ದಾರೆ.
ಇವರ ಜೊತೆ ಮಂಡ್ಯ ತಾಲೂಕಿನ ತೂಬಿನಕೆರೆ ಗ್ರಾಮದ ಯುವತಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಔಷಧಿ ಸಿಗದೆ ಪರದಾಡುತ್ತಿದ್ದಾಗ ಅವರಿಗೂ ಕೂಡ ವಿಜಯೇಂದ್ರ ಸಹಾಯ ಮಾಡಿದ್ದಾರೆ.
ಸದ್ಯ ಸಿಎಂ ಪುತ್ರನ ಈ ಸಾಮಾಜಿಕ ಕಳಕಳಿ ಸಕ್ಕರೆ ನಾಡಿನ ಜನರ ಮೆಚ್ಚುಗೆಗೆ ಪಾತ್ರವಾಗಿದೆ.