ಮಂಡ್ಯ: ಮುಖ್ಯಮಂತ್ರಿ ಯಡಿಯೂರಪ್ಪನವರ ಕನಸಿನ ಕೂಸಾದ ಮಂಡ್ಯ ಜಿಲ್ಲೆಯ ಸರ್ ಎಂ. ವಿಶ್ವೇಶ್ವರಯ್ಯ ಕಬ್ಬು ಸಂಶೋಧನಾ ಕೇಂದ್ರ ಸರ್ಕಾರದ ನಿರ್ಲಕ್ಷ್ಯಕ್ಕೊಳಗಾಗಿ ಉಪಯೋಗಕ್ಕೆ ಬಾರದಂತಾಗಿದೆ.
ಮಂಡ್ಯದ ಹೊರ ವಲಯದಲ್ಲಿರುವ ಈ ಕೇಂದ್ರವನ್ನು ಅಂದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಘೋಷಣೆ ಮಾಡಿ, ಉದ್ಘಾಟನೆ ಮಾಡಿದ್ದರು. ಆದರೆ ಈ ಸಂಶೋಧನಾ ಸಂಸ್ಥೆ ಸರಿಯಾದ ನಿರ್ವಹಣೆ ಇಲ್ಲದೆ ಈಗ ಬಾಗಿಲು ಮುಚ್ಚಿದೆ. ಒಂದೆರಡು ಬಾರಿ ಮಾತ್ರ ರೈತರಿಗೆ ತರಬೇತಿ ನೀಡಿದ್ದು ಬಿಟ್ಟರೆ ಸಮಸ್ಥೆಯಿಂದ ಯಾವುದೇ ಉಪಯೋಗ ಆಗಿಲ್ಲ. ಸಂಶೋಧನಾ ಸಂಸ್ಥೆ ಆರಂಭಕ್ಕೆ ಸರ್ಕಾರ 5 ಕೋಟಿ ರೂಪಾಯಿಗಳನ್ನು ವ್ಯಯಿಸಿತ್ತು. ಆದರೆ ಪೂರ್ಣ ಪ್ರಮಾಣದ ನಿರ್ದೇಶಕರ ನೇಮಕಾತಿ ನಡೆಯಲಿಲ್ಲ. ಕೇಂದ್ರ ಆರಂಭವಾಗಿ ಸುಮಾರು 8 ವರ್ಷಗಳೇ ಕಳೆದಿದೆ. ಆದರೆ ಇದುವರೆಗೆ ನಿರ್ದೇಶಕರು ಇರಲಿ ಪೂರ್ಣ ಪ್ರಮಾಣದ ನೌಕರರ ನೇಮಕಾತಿಯೇ ನಡೆದಿಲ್ಲ.
ದಕ್ಷಿಣ ಕರ್ನಾಟಕದ 16 ಕಬ್ಬಿನ ಕಾರ್ಖಾನೆಗಳು ಈ ಕೇಂದ್ರದ ವ್ಯಾಪ್ತಿಗೆ ಸೇರುತ್ತವೆ. ಪ್ರಸ್ತುತ ಸಂಸ್ಥೆಯಲ್ಲಿ 7 ಕೋಟಿ ರೂಪಾಯಷ್ಟು ಆದಾಯ ಇದೆ ಎಂದು ಹೇಳಲಾಗುತ್ತಿದೆ. ಆದರೆ ಆ ಹಣವೂ ರೈತರಿಗೆ ಉಪಯೋಗಕ್ಕೆ ಸಿಗುತ್ತಿಲ್ಲ. ವಿವಿಧ ಬಗೆಯ ಕಬ್ಬಿನ ತಳಿಯ ಸಂಶೋಧನೆ, ಸಕ್ಕರೆ ಉತ್ಪಾದನಾ ವಿಧಾನದ ಸುಧಾರಣೆ, ಕಂಡಸಾರಿ ಕಾರ್ಖಾನೆಗಳ ಸುಧಾರಣೆಯ ಸಂಶೋಧನೆಯನ್ನು ಮಾಡಬೇಕಾದ ಈ ಸಂಸ್ಥೆಯೇ ಸುಧಾರಣೆ ಆಗದೆ ಅತ್ತ ಕಡೆ ನೌಕರರು ಇಲ್ಲದೆ ಬಾಗಿಲು ಮುಚ್ಚಿದೆ.
ಈಗ ಮತ್ತೆ ಯಡಿಯೂರಪ್ಪ ಸಿಎಂ ಆಗಿದ್ದಾರೆ. ಅವರ ಕನಸಿನ ಕೂಸಾದ ಈ ಸಂಸ್ಥೆಗೆ ಮರುಜೀವ ನೀಡುವ ಜೊತೆಗೆ, ಹೊಸ ತಳಿಗಳ ಸಂಶೋಧನೆಯ ಭರವಸೆಯಲ್ಲಿದ್ದಾರೆ ಜಿಲ್ಲೆಯ ಕಬ್ಬು ಬೆಳೆಗಾರರು.