ಮಂಡ್ಯ: ಜೂನ್ 14 ರಂದು ನಡೆದಿದ್ದ ನೀರು ಮಿಶ್ರಿತ ಹಾಲು ಹಗರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ಆರಂಭವಾಗಿದೆ. ಬೆಂಗಳೂರಿನ ಸಿಐಡಿ ಇನ್ಸ್ಪೆಕ್ಟರ್ ನರೇಂದ್ರ ಕುಮಾರ್ ನೇತೃತ್ವದ ತಂಡ ಮದ್ದೂರು ಪೋಲೀಸ್ ಠಾಣೆಗೆ ಆಗಮಿಸಿ ಒಕ್ಕೂಟದ ಅಧಿಕಾರಿಗಳು ಮತ್ತು ಆರೋಪಿಗಳ ವಿರುದ್ಧ ನೀಡಿರುವ ದೂರಿನನ್ವಯ ದಾಖಲಾಗಿರುವ ಎಫ್ಐಆರ್ ಸೇರಿದಂತೆ ಕಡತಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ನಂತರ ಮದ್ದೂರು ತಾಲೂಕಿನ ಗೆಜ್ಜಲಗೆರೆ ಜಿಲ್ಲಾ ಹಾಲು ಒಕ್ಕೂಟದ ಆಡಳಿತ ಕಚೇರಿಗೆ ಭೇಟಿ ನೀಡಿದ ತಂಡ, ವ್ಯವಸ್ಥಾಪಕ ನಿರ್ದೇಶಕ ಡಿ.ಅಶೋಕ್ ಅವರಿಂದ ಹಗರಣದ ಬಗ್ಗೆ ಮಾಹಿತಿ ಕಲೆ ಹಾಕಿದರು. ಅವರಿಂದ ಹಗರಣದ ಕೆಲವು ದಾಖಲಾತಿಗಳನ್ನು ಸಂಗ್ರಹಿಸಿಕೊಂಡು ಅಧಿಕೃತವಾಗಿ ತನಿಖೆ ಆರಂಭಿಸಿದ್ದಾರೆ.
ಹಾಲಿಗೆ ನೀರು ಮಿಶ್ರಿತ ಹಗರಣಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ತನಿಖೆ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಲು ನಿರಾಕರಿಸಿದ ಸಿಐಡಿ ಇನ್ಸ್ಪೆಕ್ಟರ್ ನರೇಂದ್ರ ಕುಮಾರ್, ಈ ಹಗರಣ ಕುರಿತಂತೆ ಕೈಗೊಂಡಿರುವ ತನಿಖೆ ಬಗ್ಗೆ ವಿವರಣೆ ನೀಡುವುದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಇದಕ್ಕೆ ಹಿರಿಯ ಅಧಿಕಾರಿಗಳು ಉತ್ತರಿಸುತ್ತಾರೆ ಎಂದು ಸ್ಪಷ್ಟಪಡಿಸಿದರು.