ಮಂಡ್ಯ: ಜೀವನದಿ, ಸಕ್ಕರೆ ಜಿಲ್ಲೆಯ ಅನ್ನದಾತೆ ಕಾವೇರಿ ಒಡಲು ತುಂಬಿದ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಾಗಿನ ಅರ್ಪಿಸಿದ್ದಾರೆ.
ಶುಭಗಳಿಗೆಯಲ್ಲಿ ಕಂದಾಯ ಸಚಿವ ಅಶೋಕ್ ಜೊತೆ ಕೆಆರ್ಎಸ್ ಅಣೆಕಟ್ಟೆಗೆ ಆಗಮಿಸಿದ ಸಿಎಂ, ಕಾವೇರಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಣೆ ಮಾಡಿದರು.
ಅಣೆಕಟ್ಟೆ ತುಂಬಿ ಜಿಲ್ಲೆಯ ರೈತರಿಗೆ ಸುಭಿಕ್ಷೆಯ ಕಾಲವಿದು. ಹೀಗಾಗಿ ಸಿಎಂ ಯಡಿಯೂರಪ್ಪ ಕಾವೇರಿ ಮಾತೆಗೆ ಬಾಗಿನ ಅರ್ಪಣೆ ಮಾಡಿದರು. ಇದಕ್ಕೂ ಮೊದಲು ಪುರೋಹಿತರಾದ ಭಾನುಪ್ರಕಾಶ್ ಶರ್ಮಾರ ಮನೆಯಲ್ಲಿ ತಯಾರು ಮಾಡಿ ತಂದಿದ್ದ ಬಾಗಿನದ ಬುಟ್ಟಿಗೆ ಸಿಎಂ ಪೂಜೆ ಸಲ್ಲಿಸಿ ಕಾವೇರಿ ಮಾತೆಯಲ್ಲಿ ಹರಕೆ ಸಲ್ಲಿಸಿದರು.
ಶೂ ಹಾಕಿಕೊಂಡೇ ಪೂಜೆ ಸಲ್ಲಿಸಿದ ರವೀಂದ್ರ ಶ್ರೀಕಂಠಯ್ಯ:
ಇತ್ತ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ ಶೂ ಹಾಕಿಕೊಂಡೆ ಬಾಗಿನ ಪೂಜೆಯಲ್ಲಿ ಪಾಲ್ಗೊಂಡರು. ದೇವರ ಸ್ವರೂಪಳಾದ ಕಾವೇರಿಗೆ ಪಾದರಕ್ಷೆ ಹಾಕಿ ಪೂಜೆ ಸಲ್ಲಿಸಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನು ಬಾಗಿನ ಕಾರ್ಯಕ್ರಮದಲ್ಲಿ ಸಂಸದೆ ಸುಮಲತಾ ಅಂಬರೀಶ್, ಸಂಸದ ಪ್ರತಾಪ್ ಸಿಂಹ, ಸಚಿವ ಆರ್. ಅಶೋಕ್, ಶಾಸಕರಾದ ಡಿ.ಸಿ. ತಮ್ಮಣ್ಣ, ಸಿ.ಎಸ್. ಪುಟ್ಟರಾಜು, ಸುರೇಶ್ ಗೌಡ, ಡಾ. ಅನ್ನದಾನಿ, ಮಾಜಿ ಶಾಸಕ ನಾರಾಯಣಗೌಡ ಸೇರಿದಂತೆ ಹಲವರು ಉಪಸ್ಥಿತಿತರಿದ್ದರು.