ಮಂಡ್ಯ: ವಿದ್ಯುತ್ ತಂತಿ ತಗುಲಿ ಬಾಲಕನೋರ್ವ ಕೈ ಕಳೆದು ಕೊಂಡಿರುವ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನ ಬೇವಿನಕುಪ್ಪೆ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬೇವಿನಕುಪ್ಪೆ ಗ್ರಾಮದ ಅಕ್ಷಯ್ ಕುಮಾರ್ (8) ಕೈ ಕಳೆದುಕೊಂಡ ಬಾಲಕ. ಮನೆಯ ಮೇಲೆ ಬಾಲಕ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್ ಹೊಡೆದಿದೆ. ಮನೆಯ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿ ತೆಗೆಯುವಂತೆ ಮನವಿ ಮಾಡಿದ್ರೂ, ಚೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಂತೆ. ಹಾಗಾಗಿ ಘಟನೆಗೆ ಚೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವೆಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ದಂತ ವೈದ್ಯನಿಗೆ ಚೂರಿ ಇರಿತ; ಸಾರ್ವಜನಿಕರಿಂದ ದುಷ್ಕರ್ಮಿಗೆ ಥಳಿತ
ಶಾಕ್ ಹೊಡೆದಿದ್ದರಿಂದ ಬಾಲಕನ ಕೈಗೆ ಸುಟ್ಟಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ನೀಡುತ್ತಿರುವ ವೈದ್ಯರು ಕೈಗೆ ಗಂಭೀರ ಗಾಯವಾಗಿದ್ದರಿಂದ ಕೈಯನ್ನು ಕತ್ತರಿಸಿದ್ದಾರೆ. ಈ ಘಟನೆ ನಡೆದು ಒಂದು ವಾರವಾದ್ರೂ, ಪರಿಹಾರ ಕೊಡಲು ಚೆಸ್ಕಾಂ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.