ಮಂಡ್ಯ: ಇಡೀ ದೇಶವೇ ಮಂಡ್ಯದಲ್ಲಿ ನಡೆದ ಚುನಾವಣೆಯನ್ನ ನೋಡಿದೆ. ಹೀಗಾಗಿ ಉತ್ತಮವಾದ ಫಲಿತಾಂಶ ಬರುತ್ತದೆ ಎಂದು ಮಾಜಿ ಶಾಸಕ ಚಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಿದರು.
ಅಭಿಮಾನಿಯೊಬ್ಬರ ಮದುವೆ ಕಾರ್ಯಕ್ರಮದ ವೇಳೆ ಮಾತನಾಡಿದ ಅವರು, ಕ್ಷೇತ್ರದ ಫಲಿತಾಂಶ ರಾಜ್ಯ ಸರ್ಕಾರದ ಮೇಲೆ ಪರಿಣಾಮ ಬೀರುವ ವಿಚಾರವಾಗಿ ಫಲಿತಾಂಶ ಬಂದ ಬಳಿಕ ವಿಶ್ಲೇಷಣೆ ಮಾಡ್ತೇವೆ. ಸದ್ಯಕ್ಕೆ ಆ ಬಗ್ಗೆ ನಾನೇನೂ ಮಾತನಾಡಲ್ಲ ಎಂದರು.
ನಿಖಿಲ್ ಸೋತರೆ ರಾಜಕೀಯ ನಿವೃತ್ತಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅವರೆಲ್ಲಾ ದೊಡ್ಡವರು. ದೊಡ್ಡವರ ಜೊತೆ ನಾವೆಲ್ಲಾ ವಾದ ಮಾಡಕಾಗುತ್ತಾ? ಅವರೇ ಈ ಬಗ್ಗೆ ತೀರ್ಮಾನ ಮಾಡುತ್ತಾರೆ. ನಾನು ಅವರ ಬಗ್ಗೆ ಚರ್ಚೆ ಮಾಡಲ್ಲ. ಸಿಎಂ ಬದಲಾವಣೆ ವಿಚಾರವಾಗಿಯೂ ಈಗೇನೂ ಚರ್ಚೆ ಮಾಡಲ್ಲ ಎಂದು ಹೇಳಿದರು.
ಸುಮಲತಾಗೆ ಚಲುವರಾಯಸ್ವಾಮಿ ಬೆಂಬಲ ನೀಡಿದ್ದಾರೆ ಎಂಬ ವಿಚಾರವಾಗಿ ಚರ್ಚೆ ಆಗಲಿ, ತಮಗೇನೂ ಅಭ್ಯಂತರವಿಲ್ಲ. ಎಲ್ಲವೂ ಮತಯಂತ್ರದ ಒಳಗಡೆ ಇದೆ. ಎಲ್ಲರೂ ಅವರಿಗೆ ಬೇಕಾದಂತೆ ಅಭಿಪ್ರಾಯ ಮೂಡಿಸಿಕೊಳ್ಳೋದು ಸಹಜ. ಪಕ್ಷೇತರ ಅಭ್ಯರ್ಥಿ ಸ್ವಾಭಿಮಾನದ ಚುನಾವಣೆ ಮಾಡಿದ್ದಾರೆ. ಎಲ್ಲಾ ರಿಪೋರ್ಟ್ ಕೂಡ ನಮ್ಮ ಪರ ಬಂದಿದೆ ಅನ್ನೋದನ್ನೂ ಕೇಳಿದ್ದೀವಿ ಎಂದರು.
ನಿಖಿಲ್ ಕುಮಾರಸ್ವಾಮಿ ಪರ ಇಡೀ ಸರ್ಕಾರವೇ ಇತ್ತು. ಮಾಜಿ ಪ್ರಧಾನಿ, ಸಿಎಂ, ಸಿಎಂ ಕುಟುಂಬ ಎಲ್ಲವೂ ಮಂಡ್ಯದಲ್ಲೇ ಬೀಡುಬಿಟ್ಟಿತ್ತು. ಹೀಗಿದ್ದೂ ಅವರ ವಿರುದ್ಧ ಫಲಿತಾಂಶದ ರಿಪೋರ್ಟ್ ಬಂದರೆ ಯಾರು ಸಹಿಸ್ತಾರೆ ಹೇಳಿ ಎಂದು ವ್ಯಂಗ್ಯವಾಡಿದರು.