ಮಂಡ್ಯ: ಬೈಕ್ನಲ್ಲಿ ಹಿಂದೂ ಯುವತಿಯನ್ನು ಕೂರಿಸಿಕೊಂಡು ಹೋಗುತ್ತಿದ್ದ ಅನ್ಯ ಕೋಮಿನ ಯುವಕನನ್ನು ತಡೆದು ಹೆದರಿಸಿದ್ದ ಆರೋಪದ ಮೇಲೆ ನಾಲ್ವರು ಯುವಕರ ವಿರುದ್ದ ಮಂಡ್ಯ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಅನ್ಯಕೋಮಿನ ಯುವಕನ ಜೊತೆ ಹೋಗುತ್ತಿದ್ದ ಯುವತಿಯನ್ನು ತಡೆದ ಸಂಘಟನೆಯೊಂದರ ಕಾರ್ಯಕರ್ತರು ಯುವಕನಿಗೆ ಹೊಡೆಯಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.
ಶ್ರೀರಂಗಪಟ್ಟಣದಿಂದಲೂ ಮಂಡ್ಯ ತಾಲೂಕಿನವರೆಗೂ ಕಾರ್ಯಕರ್ತರೊಬ್ಬರು ಇಬ್ಬರನ್ನೂ ಹಿಂಬಾಲಿಸಿ ಅಡ್ಡಗಟ್ಟಿ ನೈತಿಕ ಪೊಲೀಸ್ಗಿರಿ ನಡೆಸಲು ಮುಂದಾಗಿದ್ದರು ಎನ್ನಲಾಗಿತ್ತು. ನಂತರ ಯುವತಿಯನ್ನು ಪೋಷಕರ ವಶಕ್ಕೆ ಒಪ್ಪಿಸಿದ್ದರು. ಅಲ್ಲದೆ, ಯುವತಿ ಕರೆದೊಯ್ಯುತ್ತಿದ್ದ ಯುವಕನಿಗೆ ಎಚ್ಚರಿಕೆ ನೀಡಿ, ವಾಪಸ್ ಕಳುಹಿಸಿದ್ದಾರೆ ಎನ್ನಲಾಗಿತ್ತು. ಈ ನೈತಿಕ ಪೊಲೀಸ್ ಗಿರಿ ವಿಡಿಯೋ ನಾಲ್ಕು ದಿನಗಳ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಈ ಸಂಬಂಧ ಯುವಕ ಮಂಡ್ಯದ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹೀಗಾಗಿ, ಆರೋಪಿಗಳಾದ ಪುನೀತ್, ಲಂಕೇಶ್ ಸೇರಿ ನಾಲ್ವರ ವಿರುದ್ದ IPC 143,341,504, ಹಾಗೂ 506 ಅಡಿ ಪ್ರಕರಣ ದಾಖಲಿಸಿ ಸಿಬ್ಬಂದಿ ತನಿಖೆ ನಡೆಸುತ್ತಿದ್ದಾರೆ.
ಓದಿ: ಬೆಂಗಳೂರಿನಲ್ಲಿ ಐಟಿ ದಾಳಿ ಪ್ರಕರಣ.. ಬರೋಬ್ಬರಿ 750 ರೂ. ಅಕ್ರಮ ಆಸ್ತಿ ಬಯಲು - ದೃಢಪಡಿಸಿದ ಇಲಾಖೆ