ಮಂಡ್ಯ: 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಇಂದು ಮಂಡ್ಯ ಜಿಲ್ಲೆಯಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಬೃಹತ್ ರ‍್ಯಾಲಿಗಳ ಮೂಲಕ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷದ ಅಭ್ಯರ್ಥಿಗಳು ಶಕ್ತಿ ಪ್ರದರ್ಶನ ಮಾಡಿದರು.
ಶ್ರೀರಂಗಪಟ್ಟಣದ ಬಿಜೆಪಿ ಅಭ್ಯರ್ಥಿ ಶಕ್ತಿ ಪ್ರದರ್ಶನ: ಶ್ರೀರಂಗಪಟ್ಟಣದ ಬಿಜೆಪಿ ಅಭ್ಯರ್ಥಿ ಕ್ಷೇತ್ರದಲ್ಲಿ ಶಕ್ತಿ ಪ್ರದರ್ಶನ ಮಾಡಿದರು. ನಟ ದರ್ಶನ್ ಹಾಗೂ ಸಂಸದೆ ಸುಮಾಲತಾ ಜೊತೆಗೂಡಿ ಪಟ್ಟಣದಲ್ಲಿ ಬೃಹತ್ ಮೆರವಣಿಗೆ ನಡೆಸಿ, ತಾಲ್ಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಲೋಕಸಭೆ ಬಳಿಕ ವಿಧಾನಸಭಾ ಚುನಾವಣೆಗೆ ದರ್ಶನ್ ಎಂಟ್ರಿ ಕೊಟ್ಟು ತಮ್ಮ ಆಪ್ತನ ಪರ ಪ್ರಚಾರ ನಡೆಸಿದರು.
ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಬಾಬು ಸಹ ಶ್ರೀರಂಗಪಟ್ಟಣದಲ್ಲಿ ಹೆಚ್ಚಿನ ಕಾರ್ಯಕರ್ತರನ್ನು ಸೇರಿಸಿ ತಮ್ಮದೇ ಶೈಲಿಯಲ್ಲಿ ಶಕ್ತಿ ಪ್ರದರ್ಶನ ಮಾಡಿ ಬಿಜೆಪಿಗೆ ಟಕ್ಕರ್ ಕೊಟ್ಟರು. ಅಪಾರ ಬೆಂಬಲಿಗರು ಜೈಕಾರ ಕೂಗಿ ಸಂಭ್ರಮಿಸಿದರು. ಬಳಿಕ ಮಾತನಾಡಿದ ಅವರು, ಇವತ್ತು ನಾಮಪತ್ರ ಸಲ್ಲಿಸಿದ್ದೇನೆ. ನನ್ನ ತಂದೆ ತಾಯಿ ಆಶೀರ್ವಾದ ದೇವರ ಕೃಪೆ ಇದೆ. ಪಕ್ಷದ ಕಾರ್ಯಕರ್ತರು, ನಾಯಕರುಗಳು ನನಗೆ ಆಶೀರ್ವಾದ ಮಾಡಿದ್ದಾರೆ. ಸಹಕಾರ ಕೊಟ್ಟ ಎಲ್ಲರಿಗೂ ಧನ್ಯವಾದ ಎಂದರು.
ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚಲುವರಾಯಸ್ವಾಮಿ ಹಾಗೂ ಜೆಡಿಎಸ್ ಅಭ್ಯರ್ಥಿ ಸುರೇಶ್ ಗೌಡ ನಾಮಪತ್ರ ಸಲ್ಲಿಸಿದರು. ಬೃಹತ್ ಮೆರವಣಿಗೆ ಮೂಲಕ ಇಬ್ಬರೂ ಸಹ ಶಕ್ತಿ ಪ್ರದರ್ಶನ ಮಾಡಿದರು.
ಕೆ.ಸಿ.ನಾರಾಯಣ್ ಗೌಡ ನಾಮಪತ್ರ ಸಲ್ಲಿಕೆ: ಸಚಿವ ಕೆ.ಸಿ.ನಾರಾಯಣ್ ಗೌಡ ಅವರು ಕೆ.ಆರ್.ಪೇಟೆಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಕೆ.ಆರ್.ಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಸಾವಿರಾರು ಬೆಂಬಲಿಗರ ಜೊತೆ ಬೃಹತ್ ಮೆರವಣಿಗೆಯಲ್ಲಿ ಬಂದಿದ್ದರು. ಕೆ.ಆರ್.ಪೇಟೆ ತಹಶೀಲ್ದಾರ್ ಕಚೇರಿಯಲ್ಲಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಕೆ ಮಾಡಿದರು. ಪತ್ನಿ ದೇವಿಕಾ ಸೇರಿದಂತೆ ಪ್ರಮುಖ ಬೆಂಬಲಿಗರು ಸಾಥ್ ನೀಡಿದರು.
ಇದನ್ನೂ ಓದಿ: ₹10 ಸಾವಿರ ಠೇವಣಿಯನ್ನು ನಾಣ್ಯಗಳಲ್ಲೇ ಪಾವತಿಸಿದ ಆಮ್ ಆದ್ಮಿ ಅಭ್ಯರ್ಥಿ- ವಿಡಿಯೋ