ಮಂಡ್ಯ: ತೀವ್ರ ಕುತೂಹಲ ಕೆರಳಿಸಿದ್ದ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಪಕ್ಷದ ಅಭ್ಯರ್ಥಿಗಳು ನಿನ್ನೆ ನಾಮಪತ್ರ ಸಲ್ಲಿಸಿದರು. ಅಮವಾಸ್ಯೆ ಹಿನ್ನೆಲೆಯಲ್ಲಿ ಮಂಡ್ಯದ ಶಕ್ತಿ ದೇವತೆಕಾಳಿಕಾಂಬ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಉಮೇದುವಾರಿಕೆ ಸಲ್ಲಿಸಿದರು.
ಮಂಡ್ಯ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಿ ಆರ್ ರಾಮಚಂದ್ರು, ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಂ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಗಣಿಗ ರವಿಕುಮಾರ್ ಅವರು ನಾಮಿನೇಷನ್ ಸಲ್ಲಿಕೆಗೂ ಮುನ್ನ ಮಂಡ್ಯದಲ್ಲಿ ಬೃಹತ್ ರೋಡ್ ಶೋ ನಡೆಸಿ ಶಕ್ತಿ ಪ್ರದರ್ಶನ ಮಾಡಿದರು. ಬಳಿಕ, ಮಂಡ್ಯ ತಾಲೂಕು ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಂ ಪರ ಸಂಸದೆ ಸುಮಾಲತಾ ಹಾಗೂ ಸಚಿವ ಅಶ್ವತ್ಥ ನಾರಾಯಣ್ ಬೃಹತ್ ಮೆರವಣಿಗೆಯಲ್ಲಿ ಭಾಗಿಯಾಗಿ ಶಕ್ತಿ ಪ್ರದರ್ಶನದ ಮಾಡಿದರು. ಈ ವೇಳೆ ಮಾತನಾಡಿದ ಸಚಿವ ಅಶ್ವತ್ಥ ನಾರಾಯಣ್, ಹೊಸ ಇತಿಹಾಸ ಸೃಷ್ಟಿಸಲು ಇಂದು ಇಷ್ಟೊಂದು ಜನ ಸೇರಿದ್ದೀವಿ. ಅಶೋಕ್ ಜಯರಾಂ ಗೆಲುವಿಗೆ ನಾವೆಲ್ಲಾ ಪಣತೊಟ್ಟಿದ್ದೇವೆ. ಮಂಡ್ಯ ಅಂದ್ರೆ ಇಂಡಿಯಾ ಅನ್ನುವಂತಿತ್ತು. ಅವಕಾಶ ಕೊಟ್ಟ ಪಕ್ಷಗಳು ಮಂಡ್ಯ ಅಭಿವೃದ್ಧಿ ಮಾಡಲಿಲ್ಲ. ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ. ಅದಕ್ಕಾಗಿ ಅಶೋಕ್ ಜಯರಾಂ ಅವರನ್ನು ಗೆಲ್ಲಿಸಬೇಕು. ಸಂಸದೆ ಸುಮಲತಾ ನಮ್ಮ ಪಕ್ಷಕ್ಕೆ ಸಂಪೂರ್ಣ ಬೆಂಬಲಕೊಟ್ಟು ಶಕ್ತಿ ತುಂಬಿದ್ದಾರೆ. ಜಿಲ್ಲೆಯಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದ್ದಾರೆ ಎಂದರು.
ಇದೇ ವೇಳೆ ಮಾತನಾಡಿದ ಸಂಸದೆ ಸುಮಾಲತಾ, ನಮ್ಮ ನಿಮ್ಮ ಮನೆ ಮಗ ಅಶೋಕ್ ಜಯರಾಂ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ನಿಮ್ಮೆಲ್ಲರ ಆಶೀರ್ವಾದ ಅಶೋಕ್ ಮೇಲೆ ಇರಲಿ. 35 ವರ್ಷದಿಂದ ಒಂದು ಪಕ್ಷ ಜಯರಾಂ ಕುಟುಂಬಕ್ಕೆ ಅನ್ಯಾಯ ಮಾಡಿಕೊಂಡು ಬಂದಿದೆ. ಆ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕು. ಈ ವ್ಯಕ್ತಿಗೆ ಆದ ಅನ್ಯಾಯ ಸರಿಪಡಿಸಬೇಕು. ಜಿಲ್ಲೆಯ ಜನರು ಹೊಸ ಅಲೆ, ಬದಲಾವಣೆ ಬಯಸಿದ್ದಾರೆ. ಖಂಡಿತ ಈ ಬಾರಿ ಬಿಜೆಪಿ ಬಾವುಟ ಹಾರಿಸುತ್ತೇವೆ ಎಂದರು.
ಇದನ್ನೂ ಓದಿ : ಮಂಡ್ಯದಲ್ಲಿ ಮಾಜಿ ಸಿಎಂ ಹೆಚ್ಡಿಕೆ ಸ್ಪರ್ಧಿಸಬೇಕು: ಶಾಸಕ ಎಂ ಶ್ರೀನಿವಾಸ್ ಒತ್ತಾಯ
ಮಂಡ್ಯ ಅಂದ್ರೆ ಇಂಡಿಯಾ, ಇಂಡಿಯಾ ಅಂದ್ರೆ ಮಂಡ್ಯ. ಇಲ್ಲಿ ದಬ್ಬಾಳಿಕೆಯ ರಾಜಕಾರಣ ತೊಲಗಿಸಬೇಕು. ಕಳೆದ ಬಾರಿ 7 ಕ್ಕೆ 7 ಗೆಲ್ಲಿಸಿದ್ರು ಯಾವುದೇ ಅಭಿವೃದ್ಧಿ ಆಗಿಲ್ಲ. ಬಳಿಕ ನೀವು ಇತಿಹಾಸ ನಿರ್ಮಿಸಿದ್ರಿ. ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದ್ರಿ. ಹಾಗೆಯೇ, ಅಶೋಕ್ ಜಯರಾಂ ಅವರನ್ನ ಗೆಲ್ಲಿಸಬೇಕು. ಈ ಬಾರಿ ಕುಟುಂಬ ರಾಜಕಾರಣ ತೆಗೆದು ಹಾಕಬೇಕು. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿ ಎಂದು ಜೆಡಿಎಸ್ಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.
ಎಂ ಶ್ರೀನಿವಾಸ್ ಮೆರವಣಿಗೆ: ಇನ್ನು ಜೆಡಿಎಸ್ ವರಿಷ್ಠರ ವಿರುದ್ಧ ಬಂಡಾಯದ ಬಾವುಟ ಹಾರಿಸಿರುವ ಹಾಲಿ ಮಂಡ್ಯ ಶಾಸಕ ಎಂ. ಶ್ರೀನಿವಾಸ್, ಬೃಹತ್ ಮೆರವಣಿಗೆ ನಡೆಸಿ ಶಕ್ತಿ ಪ್ರದರ್ಶನ ಮಾಡಿದರು. ಬಳಿಕ, ತಾಲೂಕು ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಜೊತೆಗೆ, ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ, ಶ್ರೀನಿವಾಸ್ ಅಳಿಯ ಯೋಗೇಶ್, ಮಹಾಲಿಂಗೇಗೌಡ ಅವರು ಸ್ವಾಭಿಮಾನಿ ಪಡೆ ಹೆಸರಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಮೂವರಲ್ಲಿ ಒಬ್ಬರನ್ನು ಚುನಾವಣೆಯ ಕಣದಲ್ಲಿ ಉಳಿಸಿ, ಇಬ್ಬರು ನಾಮಪತ್ರ ವಾಪಸ್ ತೆಗೆದುಕೊಳ್ಳುತ್ತಾರೆ ಎನ್ನಲಾಗಿದೆ.