ಮಂಡ್ಯ: ಜಿಲ್ಲೆಯ ಜೀವನಾಡಿ ಕೆಆರ್‌ಎಸ್ ಕಟ್ಟೆ ಉಳಿಸಿ ಎಂದು ಅಭಿಯಾನ ಆರಂಭಿಸಿರುವ ಕೆಆರ್‌ಎಸ್ ಉಳಿಸಿ ಹೋರಾಟ ಸಮಿತಿಯು ಜುಲೈ 29ರಂದು ಮಂಡ್ಯ ಬಂದ್‌ಗೆ ಕರೆ ನೀಡಿದೆ.
ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದಲ್ಲಿ ಸಂಪೂರ್ಣವಾಗಿ ಕಲ್ಲು ಗಣಿಗಾರಿಕೆ ನಿಲ್ಲಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಲು ಬಂದ್ ಕರೆ ನೀಡಲಾಗಿದೆ. ಸಮಿತಿ ಸದಸ್ಯರು ಇಂದು ಪ್ರವಾಸಿ ಮಂದಿರದಲ್ಲಿ ನಡೆಸಿದ ಸಭೆಯಲ್ಲಿ ಬಂದ್ ಕರೆಯ ನಿರ್ಧಾರ ಕೈಗೊಂಡರು.
ಸಭೆಯಲ್ಲಿ ರೈತ ಸಂಘ, ಪ್ರಗತಿಪರ ಹೋರಾಟಗಾರರು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು. ಬಂದ್‌ಗೆ ಪ್ರಗತಿಪರ ಸಂಘಟನೆಗಳು, ವರ್ತಕರು, ಆಟೋಚಾಲಕರ ಸಂಘ, ಕನ್ನಡ ಪರ ಸಂಘಟನೆಗಳಿಂದ ಬೆಂಬಲ ವ್ಯಕ್ತವಾಗಿದೆ.