ಮಂಡ್ಯ: ದೇವರ ಪೂಜೆ ವಿಚಾರದ ಸಲುವಾಗಿ 2 ಗುಂಪುಗಳ ನಡುವೆ ವೈಮನಸ್ಸು ಏರ್ಪಟ್ಟು ಸಣ್ಣಕ್ಕಿರಾಯಸ್ವಾಮಿ ದೇವಸ್ಥಾನ ಬಂದ್ ಆಗಿದೆ. ದೇವಾಲಯದ ಪ್ರವೇಶ, ದೇವರ ದರ್ಶನ ಸಿಗದ ಕಾರಣ ದೇವರ ಬಸವ ದೇವಸ್ಥಾನದ ಗೇಟ್ ಮುಂದೆ ಕಾದು ಕುಳಿತಿರುವ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ದೊಡ್ಡರಸಿನಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಸಣ್ಣಕ್ಕಿರಾಯಸ್ವಾಮಿಗೆ ದೇವರ ಬಸವ ಪ್ರತಿ ಸೋಮವಾರ ಬಂದು ಪೂಜೆ ಸಲ್ಲಿಸುತ್ತಿತ್ತು. ಆದರೆ ದೇವರ ಪೂಜೆ ಮಾಡುವ ಸಮುದಾಯಯೊಂದರ ಅರ್ಚಕರ ವಿಚಾರಕ್ಕೆ ಗ್ರಾಮಸ್ಥರು ಹಾಗೂ ದೇವಾಲಯ ಟ್ರಸ್ಟಿ ಅಧ್ಯಕ್ಷ ಜಯಪ್ರಕಾಶ್ ಗೌಡ ನಡುವೆ ವೈಮನಸ್ಸು ಅರಂಭವಾಗಿದೆ.
ದೇವಾಲಯ ಜೀರ್ಣೋದ್ಧಾರ ನಂತರ ರಚಿಸಲ್ಪಟ್ಟ ಟ್ರಸ್ಟ್ ಅಧ್ಯಕ್ಷ ಜಯಪ್ರಕಾಶ್ ಗೌಡ ಈಗಿನ ಅರ್ಚಕರನ್ನು ತೆಗೆದು ಹೊಸ ಅರ್ಚಕರ ನೇಮಕ ವಿಚಾರವಾಗಿ ಗೊಂದಲ ಸೃಷ್ಟಿಸಲು ಮುಂದಾಗಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ವಿಷಯಕ್ಕೆ ಗ್ರಾಮಸ್ಥರು ಹಾಗೂ ದೇವಾಲಯ ಟ್ರಸ್ಟ್ ಅಧ್ಯಕ್ಷರ ನಡುವೆ ಕಿತ್ತಾಟ ಶುರುವಾಗಿದ್ದು, ದೇವಸ್ಥಾನಕ್ಕೆ ಬೀಗ ಜಡಿದಿದ್ದಾರೆ.
ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಜಯಪ್ರಕಾಶ್ ಗೌಡ ದೇವಸ್ಥಾನ ನನ್ನದು ಎಂದು ಬೀಗ ಹಾಕಿದ್ದಾರೆ. ಅಲ್ಲದೇ ವೇಳೆ ಜಿರ್ಣೋದ್ಧಾರ ವೇಳೆ ನಿಧಿ ಆಸೆಗೆ ಮೂಲ ಲಿಂಗ ಕಿತ್ತು ಹಾಕಿದ್ರು ಎಂದು ಕೆಲವರು ಆರೋಪಿಸಿದ್ದಾರೆ. ಎರಡು ಗುಂಪುಗಳ ನಡುವೆ ಕಳೆದ ಒಂದು ವಾರದಿಂದ ಕಿತ್ತಾಟ ಆರಂಭವಾಗಿದ್ದು, ಸಣ್ಣಕ್ಕಿರಾಯ ಸ್ವಾಮಿ ದೇವಸ್ಥಾನದ ಒಳಗೆ ಬಂಧಿಯಾಗಿದ್ದಾನೆ.
ಇದನ್ನೂ ಓದಿ: ನಾಯಕತ್ವ ಬದಲಾವಣೆ ಬಳಿಕ ಮೊದಲ ಉಪಸಮರ: ಬೊಮ್ಮಾಯಿಗೆ ಅಗ್ನಿ ಪರೀಕ್ಷೆ, ಬಿಜೆಪಿಗಿದು ಸತ್ವ ಪರೀಕ್ಷೆ..!
ಮೌನಕ್ಕೆ ಶರಣಾದ ದೇವರ ಬಸವ... ದರ್ಶನವಿಲ್ಲದೇ ಹೋಗಲಾರೆ ಎಂದು ಪಟ್ಟು
ವಾರದ ಪೂಜೆಗೆ ನಿನ್ನೆ ಬೆಳಗ್ಗೆ ದೇವಸ್ಥಾನಕ್ಕೆ ಬಂದ ಪವಾಡ ಬಸವ ದೇವರ ದರ್ಶನಕ್ಕಾಗಿ ಗೇಟ್ ಮುಂದೆಯೇ ಠಿಕಾಣಿ ಊಡಿದ್ದು, ದೇವರ ದರ್ಶನವಿಲ್ಲದೇ ವಾಪಸ್ ಆಗಲು ಬಸವಪ್ಪ ನಕಾರ ತೋರಿದ್ದಾನೆ. ಸಣ್ಣಕ್ಕಿರಾಯ ಸ್ವಾಮಿ ದರ್ಶನ ಪಡೆಯದೇ, ಹಿಂತಿರುಗುವುದಿಲ್ಲ ಎಂದು ದೇವರ ಬಸವ ಪಟ್ಟು ಹಿಡಿದು ಕಳೆದ 24 ಗಂಟೆಯಿಂದ ಕೂತಲ್ಲೇ ಕೂತಿದ್ದಾನೆ. ಇತ್ತ ಗ್ರಾಮಸ್ಥರ ಮನವೊಲಿಕೆಗೂ ಜಗ್ಗದೇ, ಕುಳಿತ ಜಾಗ ಬದಲಾಯಿಸದೇ ಮೌನ ವಹಿಸಿದ್ದಾನೆ. ಈ ವಿಚಾರ ತಿಳಿದರೂ ಅಧಿಕಾರಿಗಳು ಮಾತ್ರ ತಲೆ ಕೆಡಿಸಿಕೊಳ್ಳದೇ ಸುಮ್ಮನಿದ್ದಾರೆನ್ನುವ ಆರೋಪ ಕೇಳಿಬಂದಿದೆ.