ಮಂಡ್ಯ: ಸರ್ಕಾರ ಬಂದು ವರ್ಷ ಕಳೆದಿದೆ. ಅಧಿಕಾರಕ್ಕೆ ಬಂದಾಗ ಒಂದು ಕಡೆ ನೆರೆ, ಮತ್ತೊಂದು ಕಡೆ ಬರ. ಇದರ ನಡುವೆ ಕೋವಿಡ್ ಬಂದು ಸಮಸ್ಯೆ ಎದುರಾಗಿದೆ. ಆದರೂ ನಮ್ಮ ಸಿಎಂ ಬಿ.ಎಸ್.ಯಡಿಯೂರಪ್ಪ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದಾರೆ ಎಂದು ಸಿಎಂ ಪುತ್ರ ವಿಜಯೇಂದ್ರ ತಂದೆ ಪರ ಬ್ಯಾಟಿಂಗ್ ಮಾಡಿದರು.
ಮದ್ದೂರು ತಾಲೂಕಿನ ಛತ್ರಲಿಂಗನದೊಡ್ಡಿಗೆ ಭೇಟಿ ನೀಡಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಇನ್ನೂ 3 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಇರುತ್ತಾರೆ. ಇಡೀ ರಾಜ್ಯವನ್ನು ಅಭಿವೃದ್ಧಿ ಮಾಡುವ ಆಸೆ ಮುಖ್ಯಮಂತ್ರಿಗಳಿಗಿದೆ. ನಮ್ಮ ಶಾಸಕರು ಇರಲಿ, ಇರದೇ ಇರಲಿ. ಮಂಡ್ಯ ಜಿಲ್ಲೆ ಅಭಿವೃದ್ಧಿ ಜೊತೆಗೆ ಸಿಎಂಗೆ ಜನ್ಮ ಕೊಟ್ಟ ಕೆ.ಆರ್.ಪೇಟೆ ತಾಲೂಕನ್ನು ಅಭಿವೃದ್ಧಿ ಮಾಡಲಿದ್ದಾರೆ ಎಂದರು.
ಎಲ್ಲರೂ ಹೇಳ್ತಾರೆ, ಮಂಡ್ಯ ಶುಗರ್ ಫ್ಯಾಕ್ಟರಿ, ಪಾಂಡವಪುರ ಶುಗರ್ ಫ್ಯಾಕ್ಟರಿ ಪ್ರಶ್ನೆ ಬಂದಾಗ ಯಾವ ಮುಖ್ಯಮಂತ್ರಿ ಅನುದಾನ ಕೊಟ್ಟಿದ್ದು ಅಂತಾ. ಯಡಿಯೂರಪ್ಪ ಸಿಎಂ ಆದಾಗ 200 ಕೋಟಿ ಅನುದಾನ ಕೊಟ್ಟರು. ಎರಡೂ ಕಾರ್ಖಾನೆಗಳನ್ನು ಪುನಶ್ಚೇತನ ಮಾಡಿದರು. ಯಾವ ಮುಖ್ಯಮಂತ್ರಿ ಮಾಡಿರಲಿಲ್ಲ. ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರ ಸೇರಿದಂತೆ ಮಂಡ್ಯದಲ್ಲಿ ಹಲವು ಅಭಿವೃದ್ಧಿ ಕೆಲಸ ಆಗಿವೆ. ಕೆ.ಆರ್.ಪೇಟೆಗೆ 269 ಕೋಟಿ ನೀರಾವರಿ ಯೋಜನೆ ಘೋಷಣೆ ಮಾಡಿದ್ದಾರೆ. ಮಂಡ್ಯ ನಗರ ಅಭಿವೃದ್ಧಿಗೆ ಹತ್ತಾರೂ ಕೋಟಿ ಬಿಡುಗಡೆ ಮಾಡಿದ್ದಾರೆ. ರಾಜ್ಯದ ಅಭಿವೃದ್ಧಿ ಜೊತೆಗೆ ಮಂಡ್ಯ ಅಭಿವೃದ್ಧಿ ಮಾಡುತ್ತಾರೆ ಎಂದರು.
ಇನ್ನು ಚಿತ್ರ ನಟರು ಕೇವಲ ಒಂದು ಪಕ್ಷ ಅಲ್ಲ, ಎಲ್ಲಾ ಪಕ್ಷದ ಪರವಾಗಿ ಪ್ರಚಾರ ಮಾಡ್ತಾರೆ. ಈ ರೀತಿಯ ಕೀಳುಮಟ್ಟದ ರಾಜಕೀಯಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಓಡಿ ಹೋಗುವ ಪ್ರಶ್ನೆಯೇ ಇಲ್ಲ. ವಿಜೇಯೇಂದ್ರ ಏನು ಎಂದು ಕಾರ್ಯಕರ್ತರಿಗೆ ಗೊತ್ತು ಎಂದರು.