ಮಂಡ್ಯ : ಹಾಡಹಗಲೇ ಲಾಂಗ್ ಹಿಡಿದು ಫೀಲ್ಡ್ಗಿಳಿದ ರೌಡಿಗಳು, ಸಿನಿಮಾ ಶೈಲಿಯಲ್ಲಿ ಯುವಕನನ್ನು ಕೊಚ್ಚಿ ಕೊಲೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಮತ್ತೆ ರೌಡಿ ಚಟುವಟಿಕೆಯಿಂದ ಜನರು ಆತಂಕಕ್ಕೊಳಗಾಗಿದ್ದಾರೆ.
ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯಲ್ಲಿ ಸಾರ್ವಜನಿಕರ ಎದುರೇ ನವೀನ್ ಅಲಿಯಾಸ್ ಕುಟ್ಟಿ (32) ಎಂಬಾತನ ಮೇಲೆ ಹಲ್ಲೆ ಮಾಡಿದ್ದಾರೆ. ಮೂವರು ಯುವಕರು ನಡುರಸ್ತೆಯಲ್ಲಿ ನವೀನ್‌ನನ್ನು ಬೆನ್ನಟ್ಟಿಕೊಂಡು ಹೋಗಿ ಲಾಂಗ್‌ನಿಂದ ಹಲ್ಲೆ ಮಾಡಿ, ಚಾಕುವಿನಿಂದ ಚುಚ್ಚಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ನವೀನ್‌ನನ್ನು ಕೆ.ಎಂ.ದೊಡ್ಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು.
ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಮೆಡಿಕಲ್ ಕಾಲೇಜಿನಲ್ಲಿ ದಾಖಲು ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ನವೀನ್ ಸಾವನ್ನಪ್ಪಿದ್ದಾನೆ. ಈ ಕುರಿತು ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.