ಮಂಡ್ಯ: ಜೆಡಿಎಸ್ ಭದ್ರಕೋಟೆಗೆ ಲಗ್ಗೆ ಇಡಲು ಬಿಜೆಪಿ ಪ್ಲಾನ್ ರೂಪಿಸುತ್ತಿದೆ. ಈ ಯೋಜನೆಯ ನೇತೃತ್ವವನ್ನು ಖುದ್ದು ಪಕ್ಷದ ರಾಜ್ಯಾಧ್ಯಕ್ಷರೇ ವಹಿಸಿರೋದು ವಿಶೇಷ. ಜಿಲ್ಲೆಯಲ್ಲಿ ಲಕ್ಷ ಕಾರ್ಯಕರ್ತರ ಗುರಿ ಹಾಕಿ ಕೊಂಡು ಅಖಾಡಕ್ಕೆ ಧುಮುಕಿರುವ ಕಟೀಲ್ ಅವರು ಯಡಿಯೂರಪ್ಪ ಪರ ಮಂತ್ರ ಪಠಿಸಿದ್ದಲ್ಲದೆ, ಕಾರ್ಯಕರ್ತರಿಂದ ಸ್ವಾಭಿಮಾನದ ಘೋಷಣೆಯನ್ನೂ ಕೂಗಿಸಿ ಶಕ್ತಿ ತುಂಬಲು ಮುಂದಾಗಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಗೆ ನೆಲೆ ಇಲ್ಲ ಅನ್ನೋದನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಹೈಕಮಾಂಡ್ ಪಕ್ಷ ಬಲವರ್ಧನೆಗೆ ಮುಂದಾಗಿದೆ. ಅದಕ್ಕಾಗಿ ಖುದ್ದು ಬಿಜೆಪಿ ರಾಜ್ಯಾಧ್ಯಕ್ಷರನ್ನೇ ಅಖಾಡಕ್ಕಿಳಿಸಿದೆ. ಹೈ ಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಲಕ್ಷ ಕಾರ್ಯಕರ್ತರ ಸದಸ್ವತ್ವಕ್ಕೆ ನಳೀನ್ ಕುಮಾರ್ ಕಟೀಲ್ ಯೋಜನೆ ರೂಪಿಸಲು ಮುಂದಾಗಿದ್ದಾರೆ.
ಅದಕ್ಕಾಗಿ ಮಂಡ್ಯಕ್ಕೆ ಭೇಟಿ ನೀಡಿರುವ ಅವರು, ಸಭೆ ನಡೆಸಿ ಮಂಡಳ ಅಧ್ಯಕ್ಷರಿಂದ ಮಾಹಿತಿಗಳನ್ನು ಪಡೆದುಕೊಂಡರು. ಇನ್ನು ಬಿಜೆಪಿಯಲ್ಲಿ ಯಾವುದೇ ಗೊಂದಲ ಇಲ್ಲ ಅನ್ನೋದನ್ನು ನಳೀನ್ ಕುಮಾರ್ ಕಟೀಲ್ ತೋರಿಸಲು ಇದೇ ವೇಳೆ ಸಿಎಂ ಪರ ಘೋಷಣೆ ಕೂಗಿಸಿದರು.
ಬಿಜೆಪಿ ಮುಖಂಡರು, ಮಂಡಳ ಅಧ್ಯಕ್ಷರ, ಶಕ್ತಿ ಕೇಂದ್ರಗಳ ಅಧ್ಯಕ್ಷರ ಸಭೆ ನಡೆಸಿದ ಕಟೀಲ್ ಅವರು, ಸದಸ್ಯತ್ವ ಅಭಿಯಾನದ ಮಾಹಿತಿ ಪಡೆದರು. ಜಿಲ್ಲೆಯಲ್ಲಿ ಕನಿಷ್ಠ ಒಂದು ಲಕ್ಷ ಸಕ್ರಿಯ ಸದಸ್ಯರ ನೇಮಕಕ್ಕೆ ಸೂಚನೆ ನೀಡಲಾಗಿದೆ. ಖುದ್ದು ಸಭೆಯಲ್ಲಿ ಕಟೀಲ್ ಸದಸ್ಯರ ನೋಂದಣಿ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡರು.