ಮಂಡ್ಯ : ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಖಾತೆ ತೆರೆಯಬೇಕೆಂದು ಪ್ರಯತ್ನಪಟ್ಟಿದ್ದ ಬಿಜೆಪಿ ಸಂಪೂರ್ಣ ಸೋತು ಸುಣ್ಣವಾಗಿತ್ತು. ಆದರೆ ಇಂದು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಅವರ ನೇತೃತ್ವದಲ್ಲಿ ಕಾರ್ಯಕರ್ತರ ಸಭೆ ನಡೆಸಿ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.
ಮಂಡ್ಯದ ಖಾಸಗಿ ಸಮುದಾಯ ಭವನದಲ್ಲಿ ನಡೆದ ಸಭೆಯನ್ನು ಸದಾನಂದ ಗೌಡ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಬಿಜೆಪಿಗೆ ಸೋಲು ಎಂಬುದು ಹೊಸದೇನು ಅಲ್ಲ. ಹಾಗೆಯೇ ಮಂಡ್ಯದಲ್ಲಿ ಸೋತು ಗೆದ್ದವರು, ಗೆದ್ದು ಸೋತವರಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿರಬಹುದು. ಆದರೆ ಮಂಡ್ಯದಲ್ಲಿ ಅಧಿಕಾರದ ಕಡೆ ಹೆಜ್ಜೆ ಹಾಕುವಂತಹ ಅತ್ಯಂತ ಪ್ರಬಲ ಹೆಜ್ಜೆಯನ್ನು ಬಿಜೆಪಿ ಹಾಕಿದೆ. ಸೋಲಿನಿಂದ ನಾವು ಚಿಂತೆ ಮಾಡದೇ ಮುಂಬರುವ ಲೋಕಸಭಾ ಚುನಾವಣೆಯನ್ನು ಗೆಲ್ಲಲು ಈಗಿನಿಂದಲೇ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ರಾಜ್ಯದ ಸಿಎಂ ಕುರ್ಚಿ ಮೇಲೆ ಸಿಎಂ ಸಿದ್ದರಾಮಯ್ಯ ಅವರ ಎರಡು ಕಾಲಿದ್ದರೆ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಎರಡು ಕಾಲುಗಳಿವೆ. ಹೀಗಾಗಿ ಆ ಕುರ್ಚಿ ಯಾವಾಗ ಬೇಕಾದರೂ ಮುರಿದು ಬೀಳಬಹುದು. ಇಲ್ಲಿನ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿಗೆ ಚಲುವರಾಯ ನಾಡಾಗುವುದಿಲ್ಲ. ಇದು ಸಮಸ್ಯೆರಾಯ ನಾಡಾಗುತ್ತದೆ ಎಂದು ಟಾಂಗ್ ನೀಡಿದರು. ಬಳಿಕ ಕಾರ್ಯಕರ್ತರು ಸೋಲಿನ ಬಗ್ಗೆ ಚಿಂತಿಸದೆ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕೆಂದರು.
ಇದನ್ನೂ ಓದಿ : ಅಕ್ಕಿ ಕೊಡದಿರುವ ನೀಚ ರಾಜಕಾರಣ ನಾವು ಮಾಡಲ್ಲ: ಡಿ.ವಿ. ಸದಾನಂದ ಗೌಡ
ಮುಂದಿನ ಲೋಕಸಭಾ ಚುನಾವಣೆ ಹೊಂದಾಣಿಕೆ ಮಾಡಿಕೊಳ್ಳುವುದು, ಬಿಡುವುದು ಹೈಕಮಾಂಡ್ಗೆ ಬಿಟ್ಟ ವಿಚಾರ. ವಿಧಾನಸಭಾ ಚುನಾವಣೆಯಲ್ಲಿ ಗುಜರಾತ್ ಮತ್ತು ಉತ್ತರಪ್ರದೇಶದಲ್ಲಿ ನಡೆದ ಪ್ರಯೋಗ ದಕ್ಷಿಣ ಭಾರತದಲ್ಲಿ ನಡೆಯಲಿಲ್ಲ ಎಂದ ಸದಾನಂದ ಗೌಡರು, ಅಕ್ಕಿ ನೀಡುವ ವಿಚಾರದಲ್ಲಿ ಕೇಂದ್ರ ಮೊದಲಿನಿಂದಲೂ ಹೇಗಿತ್ತೋ ಅದೇ ರೀತಿ ತೀರ್ಮಾನ ಮಾಡಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರೋ ಮೊದಲೇ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದು ಸಿದ್ದರಾಮಯ್ಯ ಎಂದು ಹೇಳಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಪ್ರತಿಮೆ ನಿರ್ಮಾಣ ಮಾಡುತ್ತೇವೆ ಎಂದಿದ್ದರು. ಅದನ್ನು ಬಿಟ್ಟು ಜನರಿಗೆ ಮಾತು ಕೊಟ್ಟಂತೆ ಹೊಟ್ಟೆ ತುಂಬಿಸುವ ಆಶ್ವಾಸನೆ ಈಡೇರಿಸಬೇಕು. ಜನಾದೇಶ ಕೊಟ್ಟಿರೋದು ಯಾರಿಗೆ ಎಷ್ಟು ವರ್ಷ ಅಂತಲ್ಲ. ಜನರಿಗೆ ಅನ್ನ, ಮನೆ, ಉದ್ಯೋಗ ನೀಡಬೇಕೆಂದು. ಇಲ್ಲವಾದಲ್ಲಿ ಇವರ ಅಧ್ಯಾಯ ಬೇಗ ಮುಗಿಯುತ್ತದೆ ಎಂದರು. ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬಗ್ಗೆ ಪ್ರತಿಕ್ರಿಯಿಸಿದ ಸದಾನಂದ ಗೌಡ, ರಾಜ್ಯಾಧ್ಯಕ್ಷ ಸ್ಥಾನವನ್ನು ಯಾರ್ಯಾರಿಗೋ ಕೊಡೋಕೆ ಆಗಲ್ಲ. ಎಲ್ರೂ ನನಗೆ ನನಗೆ ಅಂತಾರೆ. ಆದರೇ ರಾಜಕೀಯ ವಿದ್ಯಾಮಾನಗಳು ಮತ್ತು ವ್ಯತ್ಯಾಸಗಳನ್ನು ಸರಿ ಮಾಡುವಂತಹ ಒಬ್ಬ ಯಶಸ್ವಿ ನಾಯಕನಿಗೆ ಅಧ್ಯಕ್ಷ ಸ್ಥಾನವನ್ನು ಪಕ್ಷ ಕೊಡುತ್ತದೆ ಎಂದರು.
ಇಡೀ ಸಭೆಯಲ್ಲಿ ಕಾರ್ಯಕರ್ತರಿಗೆ ಉತ್ಸಾಹ ತುಂಬೋ ಕೆಲಸ ಮಾಡಿದರು. ಸಭೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಸೋತಂತ ಎಲ್ಲ ಬಿಜೆಪಿ ಅಭ್ಯರ್ಥಿಗಳು ಹಾಜರಾಗಿದ್ದರು. ಆದರೆ ಮಾಜಿ ಸಚಿವ ಕೆ.ಸಿ. ನಾರಾಯಣ ಗೌಡ ಗೈರು ಎದ್ದು ಕಾಣುತ್ತಿತ್ತು.
ಇದನ್ನೂ ಓದಿ : ಸೋಮಣ್ಣ ಸೋತಿದ್ದು ಕಾಂಗ್ರೆಸ್ ಗ್ಯಾರಂಟಿಯಿಂದಲ್ಲ, ಸ್ವಪಕ್ಷಿಯರಿಂದ: ಸದಾನಂದ ಗೌಡ ಎದುರು ಕಾರ್ಯಕರ್ತರ ಆಕ್ರೋಶ