ಮಂಡ್ಯ: ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಜನ ಸಂಕಲ್ಪ ಯಾತ್ರೆ ನಡೆಸುತ್ತಿರುವ ಬಿಜೆಪಿ, ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿಂದು ರಣಕಹಳೆ ಮೊಳಗಿಸಿತು. ಹಳೆ ಮೈಸೂರು ಭಾಗದಲ್ಲಿ ಗಣನೀಯವಾಗಿ ಸಾಧನೆ ಮಾಡಬೇಕೆಂದು ಸಂಕಲ್ಪ ತೊಟ್ಟಿರುವ ಪಕ್ಷ, ಮಂಡ್ಯ ಜಿಲ್ಲೆಯಲ್ಲೇ ನಾಲ್ಕೈದು ಸ್ಥಾನ ಗೆಲ್ಲಲು ತಯಾರಿ ನಡೆಸುತ್ತಿದೆ. ಈ ಗುರಿಯೊಂದಿಗೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಬಹುತೇಕ ನಾಯಕರು ಫೀಲ್ಡ್ಗೆ ಇಳಿದಿದ್ದಾರೆ.
ಸಮಾವೇಶದಲ್ಲಿ ಮಾತನಾಡಿದ ಯಡಿಯೂರಪ್ಪ, ಮಂಡ್ಯ ಜಿಲ್ಲೆಯಲ್ಲಿ ನಾಲ್ಕೈದು ಸ್ಥಾನ ಗೆಲ್ಲಬೇಕು. ಆಗ ಮಾತ್ರ ನಾನು ಜಿಲ್ಲೆಯಲ್ಲಿ ಹುಟ್ಟಿದ್ದಕ್ಕೂ ಸಾರ್ಥಕವಾಗುತ್ತೆ ಅಂತ ಭಾವನಾತ್ಮಕ ದಾಳ ಉರುಳಿಸಿದ್ರು.
ಬಸವರಾಜ ಬೊಮ್ಮಾಯಿ ತಮ್ಮ ಭಾಷಣದುದ್ದಕ್ಕೂ ಯಡಿಯೂರಪ್ಪ ಅವರನ್ನು ಕೊಂಡಾಡಿದರು. ಉಗ್ರ ಶರೀನ್ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೀಡಿರುವ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಸಿಎಂ, ಕುಕ್ಕರ್ನಲ್ಲಿ ಅಕ್ಕಿ ಬೇಯಿಸೋದು ಗೊತ್ತಿತ್ತು. ಬಾಂಬ್ ಬೇಯಿಸುವುದನ್ನು ಕೇಳಿರಲಿಲ್ಲ. ಭಯೋತ್ಪಾದಕನ ಬಗ್ಗೆ ಅನುಕಂಪದ ಮಾತನಾಡುವ ಮೂಲಕ ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಓಲೈಸುತ್ತಿದೆ ಎಂದರು.
ಸಮಾವೇಶದ ಆಯೋಜನೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದ ಡಾ.ಇಂದ್ರೇಶ್ ಅವರನ್ನು ಬಿಜೆಪಿ ನಾಯಕರು ಮೇಲುಕೋಟೆ ಕ್ಷೇತ್ರದ ಅಭ್ಯರ್ಥಿ ಎಂದು ಪ್ರಕಟಿಸಿದರು. ಯಡಿಯೂರಪ್ಪ, ಬೊಮ್ಮಾಯಿ, ನಾರಾಯಣಗೌಡ ಸೇರಿದಂತೆ ಎಲ್ಲರೂ ಇಂದ್ರೇಶ್ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿ ಎಂದು ಮನವಿ ಮಾಡಿದರು.
ಕಬ್ಬಿಗೆ ಎಫ್ಆರ್ಪಿ ದರ ನಿಗದಿಪಡಿಸುವಂತೆ ಒತ್ತಾಯಿಸಿ ಕಬ್ಬು ಬೆಳೆಗಾರರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. ಮುಖ್ಯಮಂತ್ರಿಗಳ ಬಂಗಾವಲು ವಾಹನಗಳು ತೆರಳಬೇಕಿದ್ದ ಜಾಗದಲ್ಲೇ ರೈತ ಮುಖಂಡರು ಧರಣಿ ನಡೆಸಿ ಮುಖ್ಯಮಂತ್ರಿಗಳಿಗೆ ಕಪ್ಪು ಬಾವುಟ ತೋರಿಸಿ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬಿಜೆಪಿ ಜನಸಂಕಲ್ಪ ಯಾತ್ರೆ ಹಾಸ್ಯಾಸ್ಪದ, ನಾಡಿಗೆ ಮಾಡುವ ದ್ರೋಹ : ಸಿದ್ದರಾಮಯ್ಯ