ಮಂಡ್ಯ:ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪಟ್ಟಣದಲ್ಲಿ ಬೃಹತ್ ರೋಡ್ ಶೋ ಮಾಡಿ ನಂತರ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಸಿದರು.
ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಚಾರ ಭಾಷಣ ಮಾಡಿದ ನಿಖಿಲ್, ಕುಮಾರಸ್ವಾಮಿ ಅವರ ಕಾರ್ಯಗಳು ನನಗೆ ಶ್ರೀರಕ್ಷೆ ಎಂದು ಹೇಳಿದರು. ಸಮಾವೇಶದಲ್ಲಿ ಚುನಾವಣಾ ಭಾಷಣ ಮಾಡಿ ಮತ ಭೇಟೆ ಆರಂಭಿಸಿದರು.
ಹೋದಲೆಲ್ಲಾ ತುಂಬಾ ಜನ ಸ್ಪಂದನೆ ಸಿಕ್ತಿದೆ. ಸೋಮನಹಳ್ಳಿಯಲ್ಲಿ ಕೆಲ ಕಿಡಿಗೇಡಿಗಳು ಕಲ್ಲು ಎಸೆದಿದ್ದಾರೆ. ಅದಕ್ಕೆಲ್ಲ ಪ್ರತಿಕ್ರಿಯಿಸೋದು ಸರಿಯಲ್ಲ. ನನ್ನ ಬೆಂಬಲಿಗರು ಸಾಕಷ್ಟು ಫೋನ್ ಮಾಡಿದ್ರು. ಯಾವ ಕಾರಣಕ್ಕೂ ಅದರಿಂದ ಸಿಂಪತಿ ಪಡೆದುಕೊಳ್ಳುವ ಅಗತ್ಯ ನಮಗಿಲ್ಲ ಎಂದರು.
ಪುಟ್ಟರಾಜು ಮಾತನಾಡಿ, ಅತ್ಯಂತ ಪ್ರಚಂಡ ಬಹುಮತದಲ್ಲಿ ನಿಖಿಲ್ ಗೆಲ್ತಾರೆ. ಯಾರ ಅಭಿಮಾನಿಗಳೇ ಇರಲಿ. ಸ್ವಾಭಿಮಾನಕ್ಕೆ ಹೆಸರಾದ ಜಿಲ್ಲೆ ಮಂಡ್ಯ. ಯಾರು ಬೆರಳು ತೋರದ ರೀತಿಯಲ್ಲಿ ಈ ಚುನಾವಣೆ ಮಾಡಬೇಕು. 2018ರ ಚುನಾವಣೆಯಲ್ಲೇ ಈ ಜಿಲ್ಲೆಯ ಜನ ಪ್ರಜ್ಞಾವಂತರು, ಸ್ವಾಭಿಮಾನಿಗಳು ಅನ್ನೋದನ್ನ ತೋರಿಸಿಕೊಡಲಾಗಿದೆ ಎಂದರು.
ಕಾಂಗ್ರೆಸ್ಸಿನವರ ಜೊತೆ ಸೇರಿ ಒಗ್ಗಟ್ಟಿನಿಂದ ಚುನಾವಣೆ ಮಾಡಲು ನಿರ್ಧರಿಸಿದ್ದೇವೆ. ಒಗ್ಗಟ್ಟಿನಿಂದ ಚುನಾವಣೆ ಮಾಡಿ ತೋರಿಸ್ತೇವೆ. ಯಾರದ್ದೋ ಹೆಸರಲ್ಲಿ ಬೇಳೆ ಬೇಯಿಸಿಕೊಳ್ಳುವ ಉದ್ದೇಶ ಇದ್ರೆ ಈ ಜಿಲ್ಲೆಯಲ್ಲಿ ಅದಕ್ಕೆ ಅವಕಾಶ ಇಲ್ಲ. ಒಂದಲ್ಲ, ಎರಡಲ್ಲ, ಮೂರು ಬಾರಿ ಮನವಿ ಮಾಡ್ತೀವಿ. ಯಾರಿಗೆ ಏನು ಬುದ್ಧಿ ಕಲಿಸಬೇಕು ಅನ್ನೋದನ್ನ ಜಿಲ್ಲೆಯ ಜನ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.
ಮಗು ಮನಸ್ಸುಳ್ಳವರು ನಮ್ಮ ಅಭ್ಯರ್ಥಿ ನಿಖಿಲ್. ಕತ್ತಲೆಯಲ್ಲಿ ನಿಂತು ಕಲ್ಲು ಹೊಡೆದರೆ ನಮ್ಮನ್ನ ಅಲುಗಾಡಿಸಲು ಸಾಧ್ಯವಿಲ್ಲ. ಸುಮಲತಾ ಯಾವ ದೂರದೃಷ್ಟಿ ಇಟ್ಕೊಂಡು ಈ ಹೇಳಿಕೆ ನೀಡಿದ್ದಾರೆ ಗೊತ್ತಿಲ್ಲ. ನಮ್ಮ ಮುಂದೆ ಇರೋದು ಅಭಿವೃದ್ಧಿ ಅಷ್ಟೆ ಎಂದರು.
ಕತ್ತಲೆಯಲ್ಲಿ ನಿಂತು ಕಲ್ಲು ಹೊಡೆಯುವ ರಾಜಕಾರಣವನ್ನು ನಾವೆಂದೂ ಮಾಡಿಲ್ಲ. ಯಾವ ಕಾರಣಕ್ಕೂ ಜಿಲ್ಲೆಗೆ ಕಳಂಕ ತರುವಂತ ಘಟನೆ ಮಾಡಬೇಡಿ. ಅಭಿಮಾನಿ ಹೆಸರಲ್ಲಿ ಯಾರೋ ಮಾಡಿರೋದನ್ನ ಖಂಡಿಸ್ತೀನಿ. ಇನ್ಮುಂದೆ ಯಾರೇ ಆದರೂ ಇಂತಹದ್ದಕ್ಕೆ ಅವಕಾಶ ಕೊಡಬೇಡಿ. ಮಾಡಿದ್ದೇ ಆದರೆ ತಕ್ಕ ಪ್ರತಿಫಲ ಅನುಭವಿಸಬೇಕಾಗುತ್ತೆ. ಪೊಲೀಸರು ಶಿಸ್ತು ಕ್ರಮ ಕೈಗೊಳ್ತಾರೆ ಎಂದು ಎಚ್ಚರಿಸಿದರು.